ಬೆಳಗಾವಿ (ಬೆಂಗಳೂರು): ಖಾನಾಪುರದ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಾಧ್ಯಕ್ಷ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಅರವಿಂದ ಪಾಟೀಲ್ ತಮ್ಮ ಬೆಂಬಲಿಗರೊಂದಿಗೆ ಸೋಮವಾರ ಬಿಜೆಪಿ ಸೇರಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಸೇರಿದ್ದಾರೆ. ಅರವಿಂದ ಪಾಟೀಲ್ ಅವರ ಈ ದಿಢೀರ್ ನಿರ್ಧಾರ ಎಂಇಎಸ್ ಶಾಕ್ ಗೆ ಒಳಗಾಗುವಂತೆ ಮಾಡಿದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಅರವಿಂದ ಪಾಟೀಲ್ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಅರವಿಂದ ಪಾಟೀಲ್ ಕಳೆದ ಎರಡು ವರ್ಷಗಳಿಂದ ಬಿಜೆಪಿ ನಾಯಕರ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಪರವೂ ಪ್ರಚಾರ ಮಾಡಿದ್ದರು.
ಬಿಜೆಪಿ ತೆಕ್ಕೆಗೆ ಮಾಜಿ ಶಾಸಕ ಅರವಿಂದ ಪಾಟೀಲ್; ಎಂಇಎಸ್ ಗೆ ಬಿಗ್ ಶಾಕ್ 2013 ರಲ್ಲಿ ಎಂಇಎಸ್ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅರವಿಂದ ಪಾಟೀಲ್ ಗೆಲುವು ದಾಖಲಿಸಿದ್ದರು. 2018 ರ ಚುನಾವಣೆಯಲ್ಲಿ ಎಂಇಎಸ್ ನಿಂದ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದ ಅರವಿಂದ ಕಾಂಗ್ರೆಸ್ಸಿನ ಅಂಜಲಿ ನಿಂಬಾಳ್ಕರ್ ವಿರುದ್ಧ ಪರಾಭವಗೊಂಡಿದ್ದರು.
ಕಳೆದ ವರ್ಷ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಮಣಿಸಿದ್ದರು. ಬೆಳಗಾವಿಯ ಖಾನಾಪುರ, ಬೆಳಗಾವಿ ದಕ್ಷಿಣ, ಉತ್ತರ ವಿಧಾನಸಭೆ ಕ್ಷೇತ್ರ, ನಿಪ್ಪಾಣಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಭಾಷಿಕರ ಮತಗಳು ಹೆಚ್ಚಿವೆ. ಹೀಗಾಗಿ ಅರವಿಂದ ಪಾಟೀಲ್ ಸೇರ್ಪಡೆಯಿಂದ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ಖಚಿತ: ಸಿಎಂ ಬೊಮ್ಮಾಯಿ ವಿಶ್ವಾಸ