ಬೆಳಗಾವಿ: ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಎಂಇಎಸ್ ಕಾರ್ಯಕರ್ತರು ನಗರದಲ್ಲಿ ಮತ್ತೆ ಕಿರಿಕ್ ಮಾಡಿದ್ದಾರೆ. ಬೆಳಗಾವಿ ಡಿಸಿ ಕಚೇರಿಗೆ ನುಗ್ಗಲು ಯತ್ನಿಸುವ ಜೊತೆಗೆ ಕನ್ನಡ ಧ್ವಜಸ್ತಂಭ ತೆರವಿಗೆ 15 ದಿನಗಳ ಗಡುವನ್ನು ನೀಡಿದ್ದಾರೆ.
ಎಂಇಎಸ್ ಕಾರ್ಯಕರ್ತರ ಪ್ರತಿಭಟನೆ ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಹೋರಾಟಗಾರರು ವಾರದ ಹಿಂದೆಯಷ್ಟೇ ಕನ್ನಡ ಧ್ವಜಸ್ತಂಭ ಸ್ಥಾಪಿಸಿದ್ದರು. ಇದನ್ನು ಸಹಿಸಿಕೊಳ್ಳದ ಎಂಇಎಸ್ ಕಾರ್ಯಕರ್ತರು ಧ್ವಜಸ್ತಂಭ ತೆರವಿಗೆ ಪಟ್ಟು ಹಿಡಿದಿದ್ದಾರೆ.
ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಅವರು ವಿಡಿಯೋ ಕಾನ್ಫರೆನ್ಸ್ನಲ್ಲಿದ್ದ ಹಿನ್ನೆಲೆ ಮನವಿ ಸ್ವೀಕರಿಸಲು ಬರುವುದಕ್ಕೆ ಸ್ವಲ್ಪ ತಡ ಮಾಡಿದರು. ಹಾಗಾಗಿ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು.
ಈ ವೇಳೆ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆಗಮಿಸುತ್ತಿದ್ದಂತೆ ನಾಡದ್ರೋಹಿ ಘೋಷಣೆ ಕೂಗಿದರು ಎನ್ನಲಾಗಿದೆ. ಜೊತೆಗೆ ಡಿಸಿ ಎಂ.ಜಿ. ಹಿರೇಮಠ ಎದುರೇ ಏರುಧ್ವನಿಯಲ್ಲಿ ಮಾತನಾಡುತ್ತ ಪಾಲಿಕೆ ಎದುರು ಅಳವಡಿಸಿರುವ ಕನ್ನಡ ಧ್ವಜಸ್ತಂಭ ತೆರವಿಗೆ 15 ದಿನಗಳ ಗುಡುವು ನೀಡಿದರು. ಮನವಿ ಸ್ವೀಕರಿಸಿದ ಡಿಸಿ ಅವರು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.