ಬೆಳಗಾವಿ: ಮದುವೆ ನಂತರವೂ ಪ್ರೀತಿ ಮುಂದುವರೆಸಿದ್ದ ಜೋಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಂದೋಗಿ ಗ್ರಾಮದಲ್ಲಿ ನಡೆದಿದೆ.
ಪಂಚಪ್ಪಾ ಕಣವಿ (25), ಸಕ್ಕೂಬಾಯಿ ಕರಿಗಾರ (23) ಮೃತ ಪ್ರೇಮಿಗಳು. ಪಂಚಪ್ಪ ಹಾಗೂ ಸಕ್ಕೂಬಾಯಿ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೇಮ ವಿವಾಹಕ್ಕೆ ಉಭಯ ಕುಟುಂಬಸ್ಥರು ಅವಕಾಶ ನೀಡದ ಕಾರಣ ನಾಲ್ಕು ವರ್ಷಗಳ ಹಿಂದೆ ಪಂಚಪ್ಪ ಬೇರೆ ಯುವತಿ ಜೊತೆಗೆ ವಿವಾಹವಾಗಿದ್ದಾನೆ. ವಿವಾಹದ ನಂತರೂ ಸಕ್ಕೂಬಾಯಿ ಜೊತೆಗೆ ಪಂಚಪ್ಪಾ ಸಲುಗೆಯಿಂದ ಇದ್ದ. ಗೌಪ್ಯವಾಗಿ ಇಬ್ಬರು ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.
ಕಳೆದ ತಿಂಗಳು ಸಕ್ಕೂಬಾಯಿಗೆ ಬೇರೆ ಹುಡುಗನ ಜೊತೆಗೆ ವಿವಾಹ ಆಗಿದೆ. ತಿಂಗಳು ಕಳೆದರೂ ಸಕ್ಕೂಬಾಯಿ ಗಂಡನ ಮನೆಗೆ ಹೋಗಿಲ್ಲ. ಪಂಚಪ್ಪ ಹಾಗೂ ಸಕ್ಕೂಬಾಯಿ ಮದುವೆ ನಂತರವೂ ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರಂತೆ.
ಪತಿ ಮನಗೆ ಹೋಗಲು ಇಷ್ಟವಿಲ್ಲದೇ ಪ್ರೇಮಿ ಜೊತೆ ನವ ವಿಹಾಹಿತೆ ಆತ್ಮಹತ್ಯೆ ಗಂಡನ ಮನೆಗೆ ಹೋದರೆ ನಾವಿಬ್ಬರೂ ಬೇರೆ ಬೇರೆ ಆಗುತ್ತೇವೆ ಎಂದು ಪ್ರೇಮಿಗಳು ಮನನೊಂದು ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಬಳಿಕ ತಮ್ಮ ನಿರ್ಧಾರದಂತೆ ಗ್ರಾಮದ ಹೊರವಲಯದ ಜಮೀನಿನಲ್ಲಿರುವ ಮಾವಿನ ಮರಕ್ಕೆ ಒಂದೇ ಹಗ್ಗದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುದ್ದಿ ತಿಳಿದಾಕ್ಷಣವೇ ಎರಡೂ ಕುಟುಂಬಗಳ ಸದಸ್ಯರು ಸ್ಥಳಕ್ಕೆ ದೌಡಾಯಿಸಿದ್ದು, ಮಕ್ಕಳ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.