ಬೆಳಗಾವಿ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ರೈತರ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನೂತನ ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ರೈತರ ಹೋರಾಟ ವಿಸ್ತರಿಸುವ ಯೋಜನೆ ಇದೆ. ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ ನಡೆಸಲಾಗುತ್ತಿದೆ. ಮಾರ್ಚ್ 20ರಂದು ಶಿವಮೊಗ್ಗ, ಮಾರ್ಚ್ 21ರಂದು ಹಾವೇರಿ ಹಾಗೂ ಮಾರ್ಚ್ 31ರಂದು ಬೆಳಗಾವಿಯಲ್ಲಿ ರೈತರ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದರು.
ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಬೆಳಗಾವಿ ವಿಭಾಗದ ಆರು ಜಿಲ್ಲೆಗಳ ರೈತರ ಸಮಾವೇಶದಲ್ಲಿ ರೈತ ನಾಯಕರಾದ ರಾಕೇಶ್ ಟಿಕಾಯಿತ್, ಯುದ್ವೀರ್ ಸಿಂಗ್, ಡಾ. ದರ್ಶನ್ ಪಾಲ್ ಹಾಗೂ ರೈತ ಮುಖಂಡ ಯೋಗೇಂದ್ರ ಯಾದವ್ ಭಾಗವಹಿಸಲಿದ್ದಾರೆ. ಬಣಗಳನ್ನು ಮರೆತು ಸಮಾವೇಶ ಯಶಸ್ಸುಗಳಿಸಲು ಎಲ್ಲಾ ರೈತ ಸಂಘಟನೆಗಳು ನಿರ್ಧರಿಸಿವೆ. ಆದರೆ ಸಮಾವೇಶ ನಡೆಸಲು ಬೆಳಗಾವಿ ಜಿಲ್ಲಾಡಳಿತ ಜಾಗ ನೀಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಇಲ್ಲಿಯೂ ಸಮಾವೇಶಕ್ಕೆ ಅವಕಾಶ ಕೊಡದಿದ್ರೆ ನಮ್ಮ ಹೋರಾಟ ಯಾವ ಸ್ವರೂಪ ಬೇಕಾದರೂ ಪಡೆಯಬಹುದು. ಪರ್ಯಾಯ ಜಾಗ ನೀಡಿದ್ರೆ ಅಲ್ಲಿ ಸಮಾವೇಶ ನಡೆಸಲು ಸಿದ್ಧರಿದ್ದೇವೆ ಎಂದರು.
ರಾಜಕೀಯ ಒತ್ತಡದಿಂದ ಬೆಳಗಾವಿ ಜಿಲ್ಲಾಡಳಿತ ಅವಕಾಶ ನೀಡ್ತಿಲ್ಲ. ಉಪಚುನಾವಣೆ ಇರೋದ್ರಿಂದ ಸಮಾವೇಶ ನಡೆಸಲು ಜಾಗ ನೀಡಲು ಸರ್ಕಾರ ಹಿಂದೇಟು ಹಾಕುತ್ತಿರಬಹುದು. ಬಿಜೆಪಿ ಸರ್ಕಾರ ಇದ್ದಲ್ಲೆಲ್ಲಾ ಹೋರಾಟ ಹತ್ತಿಕ್ಕುವ ಕೆಲಸ ನಡೀತಿದೆ. ಇದು ಬಿಜೆಪಿ ಅಥವಾ ಕಾಂಗ್ರೆಸ್ ವಿರುದ್ಧದ ಹೋರಾಟ ಅಲ್ಲ, ರೈತರ ಉಳಿವಿಗಾಗಿ ನಡೆಯುತ್ತಿರುವ ಹೋರಾಟ ಎಂದರು.