ಬೆಳಗಾವಿ:ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ನಡೆದಿದೆ. ಅಧಿವೇಶನ ಆರಂಭಕ್ಕೂ ಮುನ್ನವೇ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕರ್ತವ್ಯಕ್ಕೆ ಬರುತ್ತಿದ್ದ ಸಿಬ್ಬಂದಿಯ ವಾಹನದ ಮೇಲೆ ಕಲ್ಲು ತೂರುವ ಮೂಲಕ ವಿಕೃತಿ ಮೆರೆದಿದ್ದಾರೆ. ನಿನ್ನೆ ರಾತ್ರಿ ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರೇ ಈ ದುರ್ಘಟನೆ ನಡೆದಿದೆ.
ಅಧಿವೇಶನ ನಿಮಿತ್ತ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ವಾಹನವೊಂದು ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿತ್ತು. ಕರ್ನಾಟಕ ಸರ್ಕಾರ ಎಂದು ಬರೆದಿರುವ ಬೋರ್ಡ್ ನೋಡಿದ ಕಿಡಿಗೇಡಿಗಳು ವಾಹನಕ್ಕೆ ಅಡ್ಡಗಟ್ಟಿ ಕಲ್ಲು ತೂರಿದ್ದಾರೆ. ಬಳಿಕ ಚಾಲಕನ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.