ಕೆಎಸ್ಆರ್ಟಿಸಿ ಬಸ್ ಅಪಘಾತಗೊಂಡ ಸ್ಥಳ ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 20 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನಡೆದಿದೆ. ಚಿಕ್ಕೊಪ್ಪ ಗ್ರಾಮದಿಂದ ರಾಮದುರ್ಗಕ್ಕೆ ಬಸ್ ಸಂಚರಿಸುತ್ತಿತ್ತು. 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಪಾಟಾ ಕಟ್ ಆದ ಪರಿಣಾಮ ಬಿಜಗುಪ್ಪಿ ಸಮೀಪದ ರಸ್ತೆ ಪಕ್ಕದ ಜಮೀನಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ.
ಬಸ್ನಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಘಟನೆ ನಡೆದ ತಕ್ಷಣವೇ 108ಕ್ಕೆ ಕರೆ ಮಾಡಿ ಗಾಯಾಳುಗಳನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಬಸ್ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ ಈ ರೀತಿಯ ಅಪಘಾತಗಳು ಸಾಮಾನ್ಯವಾಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಗ್ರಾಮೀಣ ಭಾಗದಲ್ಲಿ ಹೊಸ ಬಸ್ಗಳನ್ನು ರಸ್ತೆಗಿಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಭೀಕರ ಅಪಘಾತ: ಇಂದು ಬೆಳಗ್ಗೆ ತುಮಕೂರು ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 3 ಮಂದಿ ಸಾವನ್ನಪ್ಪಿದ್ದಾರೆ. ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಬೆಂಗಳೂರಿನಿಂದ ಪಾವಗಡ ಕಡೆಗೆ ಬರುತ್ತಿದ್ದ ಕಾರು ಹಾಗು ಪಾವಗಡದಿಂದ ತುಮಕೂರಿಗೆ ಕಡೆಗೆ ಹೋಗುತ್ತಿದ್ದ ಲಾರಿ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ. ಕಾರು ಸಂಪೂರ್ಣ ನಾಶವಾಗಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿರುವ ಟ್ರಾಮಾ ಸೆಂಟರ್‌ಗೆ ಸೇರಿಸಲಾಗಿದೆ.
ಟಯರ್ ಸಿಡಿದು ಮೀನು ಸಾಗಾಟ ವಾಹನ ಪಲ್ಟಿ: ಮಂಗಳೂರಿನ ನೇತ್ರಾವತಿ ಸೇತುವೆ ಮೇಲೆ ಟಯರ್ ಸಿಡಿದು ಮೀನು ಸಾಗಣೆಯ ಪಿಕಪ್ ವಾಹನ ಪಲ್ಟಿಯಾಗಿತ್ತು. ಮಲ್ಪೆ ಬಂದರಿನಿಂದ ಉಳ್ಳಾಲ ಆಯಿಲ್ ಮಿಲ್ಗೆ ಮೀನು ಸಾಗಾಟ ನಡೆಸುವ ವಾಹನ, ನೇತ್ರಾವತಿ ಸೇತುವೆ ತಲುಪುತ್ತಿದ್ದಂತೆ ಎದುರುಗಡೆಯ ಟಯರ್ ಸಿಡಿದಿತ್ತು. ಪರಿಣಾಮ ಒಂದು ದಿಕ್ಕಿನತ್ತ ತೆರಳಿದ ಪಿಕಪ್ ವಾಹನ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದರು. ಇನ್ನು ವಾಹನದಲ್ಲಿದ್ದ ಮೀನುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಚಲಿಸುತ್ತಿದ್ದ ಬಸ್ನಿಂದ ಬಿದ್ದು ವ್ಯಕ್ತಿ ಸಾವು: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿ, ಮತ್ತೊಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ಭಾನುವಾರ ಸಂಜೆ ನಡೆದಿತ್ತು. ಮೃತ ವ್ಯಕ್ತಿ ಕಡಬದ ಕಳಾರ ಸಮೀಪದ ಕುದ್ಕೋಳಿ ನಿವಾಸಿ ಅಚ್ಚುತ ಗೌಡ (63). ಗಂಭೀರವಾಗಿ ಗಾಯಗೊಂಡಿದ್ದ ಇವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದರು. ಭಾನುವಾರ ಸಂಜೆ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಸುಬ್ರಹ್ಮಣ್ಯ ಮಂಗಳೂರು ಕೆಎಸ್ಆರ್ಟಿಸಿ ಬಸ್ನಲ್ಲಿ ಮನೆಗೆ ಹೊರಟಿದ್ದ ಅಚ್ಚುತ್ತ ಗೌಡ ಹಾಗೂ ಬಲ್ಯ ನಿವಾಸಿ ಚಂದ್ರಶೇಖರ ಎಂಬವರು ಕಡಬ ಪೇಟೆಯ ಸಮೀಪದ ತಿರುವಿನಲ್ಲಿ ಬಸ್ನಿಂದ ರಸ್ತೆಗೆಸೆಯಲ್ಪಟ್ಟಿದ್ದರು. ಚಂದ್ರಶೇಖರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಓರ್ವ ಸಾವು : ಮತ್ತೋರ್ವನಿಗೆ ಗಾಯ