ಬೆಳಗಾವಿ:ಕೇಂದ್ರ ಸರ್ಕಾರ ರೂಪಿಸಿರುವ ಕೆಲವು ನಿಯಮಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದ್ದು, ಎಲ್ಲಾ ರಾಜ್ಯಗಳು ಈ ಸಮಸ್ಯೆ ಎದುರಿಸುತ್ತಿವೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನಗೊಳಿಸಲು ಹಲವು ತೊಂದರೆಗಳನ್ನು ಎದುರಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯಿಂದ ಎಲ್ಲ ಕಾಮಗಾರಿಗಳು ವಿಳಂಬವಾಗುತ್ತಿವೆ. ಇದರಿಂದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕಾಮಗಾರಿ ಮಾಡುವಾಗ ಅದು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಜೊತೆಗೆ ಶಾಸಕರು ಹಾಗೂ ಸಂಸದರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಆದರೆ ಮೇಲಿನ ಅಧಿಕಾರಿಗಳು ನೀಡುವ ಸಮಜಾಯಿಷಿ ಬೇರೆ ರೀತಿಯಲ್ಲಿದ್ದು, ಇದರಿಂದ ಕಾಮಗಾರಿಗೆ ತೊಂದರೆ ಆಗುತ್ತಿದೆ ಎಂದರು.