ಚಿಕ್ಕೋಡಿ : ಪ್ರತಿ ಬಾರಿ ಕೇಳಿದಾಗೊಮ್ಮೆ 'ಕಾಗವಾಡ ಮತ ಕ್ಷೇತ್ರವನ್ನು ನಂದನವನ ಮಾಡುತ್ತೇನೆ' ಎಂದು ಹೇಳುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಜವಳಿ ಖಾತೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೂತನ ಸಚಿವರಾಗಿದ್ದು, ಈಗ ಮತ್ತಷ್ಟು ಜವಬ್ದಾರಿ ಅವರ ಬೆನ್ನಿಗೆ ಬಿದ್ದಿದೆ.
ಮೂವತ್ತು ವರ್ಷಗಳ ನಂತರ ಕಾಗವಾಡ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಈ ಕ್ಷೇತ್ರದಲ್ಲಿ ಈವರೆಗೆ ಸಚಿವರಾಗಿದ್ದವರು ಹೊರಗಿನವರು. ಇದೇ ಮೊದಲ ಬಾರಿಗೆ ಸ್ವಕ್ಷೇತ್ರ ಕಾಗವಾಡ ತಾಲೂಕಿನವರಾದ (ಕೆಂಪವಾಡ ಗ್ರಾಮ) ಶ್ರೀಮಂತ ಪಾಟೀಲ್ ಸಚಿವರಾಗಿರುವುದು ಸ್ಥಳೀಯರಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಹತ್ತು-ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಈಗಾಗಲೇ ಕಾಗವಾಡ ಕ್ಷೇತ್ರವನ್ನ 'ಭ್ರಷ್ಟಾಚಾರ ಮುಕ್ತ ಹಾಗೂ ಕರ್ನಾಟಕದ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ' ಎನ್ನುವ ಮಾತುಗಳನ್ನು ಪ್ರತಿ ಕಾರ್ಯಕ್ರಮದಲ್ಲಿ ಹೇಳುತ್ತಾ ಬರುತ್ತಿದ್ದಾರೆ. ಪಾಟೀಲರು ಅದನ್ನು ಯಾವ ಮಟ್ಟಿಗೆ ಬದಲಾವಣೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೇ ಪ್ರವಾಹ ಬಂದು ಅದೇಷ್ಟೊ ಕುಟುಂಬಗಳು ಬೀದಿಗೆ ಬಂದಿವೆ. 'ಪರಿಹಾರ ವಿಷಯದಲ್ಲಿ ತಾರತಮ್ಯವಾಗಿದೆ' ಎಂದು ನೆರೆಗೆ ಒಳಗಾದ ಗ್ರಾಮಸ್ಥರು ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ ಕಳಿಸುತ್ತಿದ್ದಾರೆ. ಆದಷ್ಟು ಬೇಗೆ ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರವನ್ನು ಸಚಿವರು ದೊರಕಿಸಿಕೊಡಬೇಕಿದೆ.
ಕಾಗವಾಡ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಎಕರೆ ಬರಡು ಭೂಮಿಗೆ ನೀರು ಹರಿಸಲು ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನದಿ ಪಾತ್ರದ ಗ್ರಾಮಗಳಲ್ಲಿರುವ ಸಾವಿರಾರು ಎಕರೆ ಭೂಮಿ ಸವುಳು-ಜವುಳಿನಿಂದ ಬರುಡಾಗಿದೆ. ಕಾಗವಾಡ ತಹಶೀಲದ್ದಾರ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಎಪಿಎಂಸಿ ಮಾರುಕಟ್ಟೆಗೆ ಕೆಲವು ಸೌಕರ್ಯಗಳ ಅಭವಾವಿದೆ. ತಾಲೂಕ ಸಮಾಜ ಕಲ್ಯಾಣ ಇಲಾಖೆ ಕಚೇರಿ ಇಲ್ಲ. ಇದರಿಂದಾಗಿ ಅಧಿಕಾರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಚೇರಿ ನಡೆಸುತ್ತಿದ್ದಾರೆ. ಇವುಗಳಲ್ಲಿ ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲ ಬಂದರೆ ಇಲ್ಲಿಯ ಅಧಿಕಾರಿಗಳ ಗೋಳು ಕೇಳತೀರದು.
ಕಾಗವಾಡ ಕ್ಷೇತ್ರವನ್ನು ರಾಜ್ಯದ ಶ್ರೀಮಂತ ಕ್ಷೇತ್ರವನ್ನಾಗಿ ಮಾಡ್ತಾರ ಸಚಿವ ಶ್ರೀಮಂತ ಪಾಟೀಲ್..?
ಕಾಗವಾಡ ಮತ ಕ್ಷೇತ್ರವನ್ನು ನಂದನ ವನ ಮಾಡುತ್ತೇನೆ ಎಂದು ಹೇಳುವ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು, ಜವಳಿ ಖಾತೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೂತನ ಸಚಿವರಾಗಿದ್ದಾರೆ. ಇದು ಸ್ಥಳೀಯರಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಹತ್ತು-ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಬೇಸಿಗೆ ಬಂದರೆ ಇಲ್ಲಿನ ಜನರು ನೀರಿಗಾಗಿ ಪರದಾಡುವಂತಾಗಿದೆ. ಬೇಸಿಗೆ ಆರಂಭವಾಗುವ ಮುನ್ನ ಮಹಾರಾಷ್ಟ್ರ ಸರ್ಕಾರ ಜೊತೆ ರಾಜ್ಯ ಸರ್ಕಾರ ಮಾತು ಕತೆ ನಡೆಸಿ, ಗಡಿ ಭಾಗದ ಜನರಿಗೆ ಅನಕೂಲವಾಗುವಂತೆ ಕೃಷ್ಣಾ ನದಿಗೆ ನೀರು ಬೀಡಿಸುವ ಕಾರ್ಯವಾಗಬೇಕಿದೆ. ಕಳೆದ ವರ್ಷ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದರಿಂದ ಗಡಿಭಾಗದ ಚಿಕ್ಕೋಡಿ, ರಾಯಭಾಗ, ಅಥಣಿ, ಕಾಗವಾಡ ತಾಲೂಕುಗಳಲ್ಲಿ ಹಾಗೂ ವಿಜಯಪೂರ, ಬಾಗಲಕೋಟೆ ಜಿಲ್ಲೆಯ ಜನರು ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಪಟ್ಟಿದ್ದರು. ಅದಕ್ಕೆ ಬೇಸಿಗೆ ಆರಂಭಕ್ಕೂ ಮುನ್ನ ಮಹಾ ಸಿಎಂ ಜೊತೆ ಸಭೆ ನಡೆಸಬೇಕಾದದ್ದು ಶ್ರೀಮಂತ ಪಾಟೀಲ್ ಅವರ ಮುಂದಿರುವ ಅಗತ್ಯ ಹಾಗೂ ದೊಡ್ಡ ಕೆಲಸ.
2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಶ್ರೀಮಂತ ಪಾಟೀಲ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಅವರು, ಕಾಗವಾಡವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ತೊಟ್ಟಿದ್ದಾರೆ. ಕೊಟ್ಟ ಮಾತಿನಂತೆ ಶ್ರೀಮಂತ ಪಾಟೀಲ ಅವರು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನ ಮಾಡ್ತಾರ? ಕಾಗವಾಡ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವರೇ ಎಂಬುದನ್ನು ಕಾದು ನೋಡಬೇಕಿದೆ.