ಬೆಂಗಳೂರು :ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ- 2023ನ್ನು ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು. ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಧ್ವನಿ ಮತಕ್ಕೆ ಹಾಕಿದಾಗ ಸದಸ್ಯರು ಸರ್ವಾನುಮತದಿಂದ ಮೇಜು ಕುಟ್ಟಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ವಿಧೇಯಕವು ವಿಧಾನಪರಿಷತ್ತಿನಲ್ಲಿ ಅಂಗೀಕಾರ ಪಡೆಯಿತು.
ಸದಸ್ಯ ರವಿಕುಮಾರ್ ಮಾತನಾಡಿ, ಪ್ರಾಧಿಕಾರ ರಚಿಸುತ್ತಿರುವುದು ಸ್ವಾಗತಾರ್ಹ. ಕನಿಷ್ಠ 500 ಕೋಟಿ ರೂ.ಮೀಸಲಿಟ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂದರು. ತೇಜಸ್ವಿನಿಗೌಡ ಮಾತನಾಡಿ, ಬಡವರು, ಬಲ್ಲಿದರೆನ್ನದೇ ಎಲ್ಲ ವರ್ಗಗಳ ಕೋಟ್ಯಂತರ ಭಕ್ತರು ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಬರುತ್ತಾರೆ. ಧಾರ್ಮಿಕ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಯಾಗಲಿ. ಜನರು ಮುಗ್ದ ಭಕ್ತಿಯಿಂದ ಲೇಪಿಸುವ ಭಂಡಾರದಲ್ಲಿ ರಸಾಯನಿಕಗಳನ್ನು ಬೆರೆಸುವುದನ್ನು ತಡೆಯಬೇಕು. ಮಲಪ್ರಭೆ, ತುಂಗಭದ್ರೆ ಸೇರಿದಂತೆ ಎಲ್ಲ ನದಿ ಪಾತ್ರಗಳಲ್ಲಿ ಆರತಿ ಕಾರ್ಯಗಳು ನಡೆಯಲಿ ಎಂದರು.
ಬಳಿಕ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಪಕ್ಷಬೇಧವಿಲ್ಲದೇ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಈ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರಸಿದ್ಧ ಕ್ಷೇತ್ರಕ್ಕೆ ಈವರೆಗೆ ರೈಲು ಸಂಪರ್ಕ ಇಲ್ಲದಿರುವುದು ವಿಷಾದನೀಯ. ಗೋಕಾಕ್ ರೋಡ್ ರೈಲು ನಿಲ್ದಾಣ-ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಮುಂಬರುವ ದಿನಗಳಲ್ಲಿ ಜಾರಿಗೆ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023: ಕರ್ನಾಟಕ ಸಿವಿಲ್ ನ್ಯಾಯಾಲಯಗಳ (ತಿದ್ದುಪಡಿ) ವಿಧೇಯಕ 2023 ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯ (ತಿದ್ದುಪಡಿ) ವಿಧೇಯಕ 2023 ಎರಡು ವಿಧೇಯಕಗಳನ್ನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದರು. ರಾಜ್ಯದ ಹೈಕೋರ್ಟಿನಲ್ಲಿ 2,77,334 ವ್ಯಾಜ್ಯಗಳು ಹಾಗೂ ಕೆಳಹಂತದ ವಿವಿಧ ನ್ಯಾಯಾಲಗಳಲ್ಲಿ 19,93,799 ವ್ಯಾಜ್ಯಗಳು ಬಾಕಿ ಇದ್ದು ,ಇವುಗಳ ತ್ವರಿತ ವಿಲೇವಾರಿಗೆ ಈ ವಿಧೇಯಕಗಳು ಅಗತ್ಯವಿದೆ ಎಂದರು. ಚರ್ಚೆ ಬಳಿಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.