ಬೆಳಗಾವಿ: ನಗರದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟನೆ ದಿವಂಗತ ಮಾಜಿ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಅವರ ಕನಸಾಗಿತ್ತು. ಇದು ಇಂದು ನನಸಾಗುತ್ತಿದೆ ಎಂದು ಕಣ್ಣೀರು ಇಡುತ್ತಾ ಅವರ ಪತ್ನಿ ಹಾಗೂ ಬೆಳಗಾವಿಯ ಲೋಕಸಭಾ ಕ್ಷೇತ್ರದ ಸಂಸದೆ ಮಂಗಳಾ ಅಂಗಡಿಯವರು ಕೆಲ ಕ್ಷಣ ಭಾವುಕರಾದರು.
198 ಕೋಟಿ ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಸುರೇಶ್ ಅಂಗಡಿ ಅವರ ಕನಸಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಈಗ ಅವರು ನಮ್ಮ ಜೊತೆ ಇಲ್ಲ ಎಂದು ಹೇಳುತ್ತಾ ಮಂಗಳಾ ಅಂಗಡಿಯವರು ಭಾವುಕರಾದರು. ಬಳಿಕ ಇಷ್ಟರ ಮಟ್ಟಿಗೆ ಸುಸರ್ಜಿತವಾದ ಈ ರೈಲು ನಿಲ್ದಾಣ ನವೀಕರಣಗೊಂಡಿದ್ದಕ್ಕೆ ಗುತ್ತಿಗೆದಾರರು ಹಾಗೂ ಹಿರಿಯ ಅಧಿಕಾರಿಗಳು ಹಾಗೂ ರೈಲ್ವೆ ಇಲಾಖೆ ಉದ್ಯೋಗಿಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಮೋದಿ ಅವರಿಂದ ಉದ್ಘಾಟನೆ ಕಾರ್ಯ ನೆರವೇರುತ್ತಿರುವುದು ತುಂಬಾ ಸಂತೋಷ ತಂದಿದೆ. ಸುರೇಶ್ ಅಂಗಡಿ ಅವರ ಕನಸು ನನಸಾಗುತ್ತಿದೆ ಎಂದು ಸಂಸದೆ ಹರ್ಷ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಬಿಗಿ ಭದ್ರತೆ:ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕುಂದಾನಗರಿಗೆ ಆಗಮಿಸುತ್ತಿರುವ ಹಿನ್ನೆಲೆ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಬೆಳಗಾವಿ ನಗರಕ್ಕೆ ಪ್ರಧಾನಿ ಆಗಮಿಸುತ್ತಿದ್ದು, ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ನಗರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಅಲೋಕ್ ಕುಮಾರ್ ಚರ್ಚೆ ನಡೆಸಿದ್ದಾರೆ.