ಬೆಳಗಾವಿ:ತಾಯಿಯ ಪಿಂಚಣಿ ಹಣಕ್ಕಾಗಿ ನಡೆದ ಜಗಳದಲ್ಲಿ ತಮ್ಮನನ್ನೇ ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ಸಹೋದರನನ್ನು ವಡಗಾಂವ ಪೊಲೀಸರು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ರಾಜು ತಳವಾರ (46) ಕೊಲೆ ಆರೋಪಿ. ಈತ ತನ್ನ ಸಹೋದರ ಬಸವರಾಜ ತಳವಾರ (41)ನನ್ನು ಕೊಲೆ ಮಾಡಿ ಪರಾರಿಯಾಗಿದ್ದನು.
ಪ್ರಕರಣ ಸಂಬಂಧ ಮಾಹಿತಿ ನೀಡಿದ ಡಿಸಿಪಿ ಡಾ.ವಿಕ್ರಮ ಆಮಟೆ ಮೂಲತಃ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ತಳವಾರ ಸಹೋದರರಾದ ರಾಜು ಮತ್ತು ಬಸವರಾಜ ಇಬ್ಬರು ಕುಡಿತದ ಚಟಕ್ಕೆ ಒಳಗಾಗಿದ್ದರು. ಕಳೆದ ಹಲವು ವರ್ಷಗಳ ಹಿಂದೆ ಬೆಳಗಾವಿ ಮಚ್ಚೆ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆದರೆ, ಕಳೆದ ಎರಡ್ಮೂರು ತಿಂಗಳ ಹಿಂದಷ್ಟೇ ರಾಜು ತಳವಾರನ ಹೆಂಡತಿ ಸಾವನ್ನಪ್ಪಿದರು. ಇದಾದ ಬಳಿಕ ತಾಯಿಯೊಂದಿಗೆ ಇಬ್ಬರು ಸಹೋದರರು ಒಂದೇ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು.
ಹೀಗಿರುವಾಗ ಆಸ್ತಿ ಕಲಹ ಹಾಗೂ ತಾಯಿಯ ಪಿಂಚಣಿ ಹಣದ ವಿಚಾರಕ್ಕೆ ಪದೇ ಪದೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ತಿರುಗಿ ಇಬ್ಬರು ಸಹೋದರರು ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ, ರಾಜು ಬಸವರಾಜನ ಮೇಲೆ ಕೊಡಲಿಯಿಂದ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಹಲ್ಲೆ ಮಾಡಿದ್ದನು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ ಸ್ಥಾನದಲ್ಲೆ ಸಾವನ್ನಪ್ಪಿದ್ದನು. ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದನು.
ಓದಿ: ಬೆಳಗಾವಿಯಲ್ಲಿ ಹರಿದ ನೆತ್ತರು.. ಕ್ಷುಲ್ಲಕ ಕಾರಣಕ್ಕೆ ತಮ್ಮನನ್ನೇ ಕೊಂದ ಅಣ್ಣ!
ಇತ್ತ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ವಡಗಾಂವಿ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ನಂದೇಶ್ವರ್, ಸಬ್ ಇನ್ಸ್‌ಪೆಕ್ಟರ್ ಆನಂದ್ ಅಡಗೊಂಡ್ ಮತ್ತು ಅವರ ಸಹೋದ್ಯೋಗಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.