ಬೆಳಗಾವಿ: ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳದಲ್ಲಿ ಓರ್ವ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಕೊಲೆಯಾದ ಯುವಕ ಮಜಗಾಂವ ಗ್ರಾಮದ ಪ್ರತೀಕ್ ಲೋಹಾರ (21) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಘಟನೆ ವಿವರ: ದ್ವಿಚಕ್ರ ವಾಹನ ನಿಲುಗಡೆ ವಿಚಾರವಾಗಿ ಮಚ್ಚೆ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರುತ್ತಿದ್ದಂತೆ ಗ್ರಾಮಸ್ಥರು ಎರಡು ಗುಂಪುಗಳ ಯುವಕರನ್ನು ಸಮಾಧಾನಪಡಿಸಿ ಕಳಿಸಿದ್ದರು. ಕೊಲೆಯಾದ ಪ್ರತೀಕ್ ಲೋಹಾರ ಹಾಗೂ ಅವನ ಸ್ನೇಹಿತ ಶುಭಂ ಸುಳಗೇಕರ ಎಂಬುವರು ಬೈಕ್ ಮೇಲೆ ಹೋಗುವಾಗ ಜಗಳವಾಡಿ ಹೋಗಿರುವ ಇನ್ನೊಂದು ಗುಂಪು ಯಳ್ಳೂರು ರಸ್ತೆಯಲ್ಲಿ ಮತ್ತೆ ಅಡ್ಡಗಟ್ಟಿ ಪ್ರತೀಕ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ದಾಳಿಯ ತೀವ್ರತೆಗೆ ಪ್ರತೀಕ ಸ್ಥಳದಲ್ಲಿಯೇ ಅಸುನೀಗಿದ್ದಾನೆ. ಅಷ್ಟಾದರೂ ಬಿಡದೆ ಮತ್ತೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಶುಭಂ ಸುಳಗೇಕರ ಎಂಬಾತ ಗಂಭೀರವಾಗಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನನ್ನ ಸ್ನೇಹಿತ ನನಗೆ ಕರೆ ಮಾಡಿದ, ಈ ರೀತಿ ಗಲಾಟೆ ಆಗಿದೆ ಎಂದು ತಿಳಿಸಿದ. ಅಲ್ಲಿ ದ್ವಿಚಕ್ರ ವಾಹನ ನಿಲುಗಡೆ ವಿಚಾರವಾಗಿ ಜಗಳ ನಡೆಯಿತು. ಆ ವೇಳೆ ಮಧ್ಯೆ ಹೋದ ನನಗೂ ಹಣೆಯ ಮೇಲೆ ಗಾಯವಾಯಿತು. ಸ್ನೇಹಿತ ಪ್ರತೀಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಬೈಕ್ ಪಾರ್ಕಿಂಗ್ ವಿಚಾರವಾಗಿ ಗಲಾಟೆ ನಡೆದು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಈಗಾಗಲೇ ಗಲಾಟೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಲ್ಲೆಗೆ ಒಳಗಾಗಿರುವ ಯುವಕ ಸ್ವಪ್ನಿಲ್ ಸುತಾರ ತಿಳಿಸಿದ್ದಾರೆ.