ಬೆಳಗಾವಿ:ಮಹಾಶಿವರಾತ್ರಿ ಹಿನ್ನೆಲೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನೆರವೇರಿಸಲಾಯಿತು.
ದಕ್ಷಿಣದ ಕಾಶಿ ಬೆಳಗಾವಿ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಸಂಭ್ರಮ .. ನಗರದ ಮಾಧ್ವಾ ರಸ್ತೆಯಲ್ಲಿರುವ ಕಪಿಲೇಶ್ವರ ದೇವಸ್ಥಾನದ ಆವರಣದಲ್ಲಿ ಹೂವು ಹಾಗೂ ದೀಪಾಲಂಕಾರ ದೇವಸ್ಥಾನಕ್ಕೆ ವಿಶೇಷ ಮೆರಗು ನೀಡಿದೆ. ದೇವರ ದರ್ಶನಕ್ಕೆ ತಂಡೋಪತಂಡವಾಗಿ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು, ಬೆಳಗ್ಗೆಯಿಂದಲೇ ಉದ್ಭವ ಮೂರ್ತಿ ಕಪಿಲೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕಪಿಲೇಶ್ವರ ದರ್ಶನ ಪಡೆಯಲು ಮಹಿಳಾ ಮತ್ತು ಪುರುಷ ಭಕ್ತರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ.
ಕಪಿಲೇಶ್ವರ ದೇವಸ್ಥಾನದ ಇತಿಹಾಸ:
ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ಕಪಿಲೇಶ್ವರ ದೇವಸ್ಥಾನ ಬೆಳಗಾವಿ ನಗರದ ಪ್ರಮುಖ ಮತ್ತು ಪುರಾತನ ದೇವಸ್ಥಾನಗಳಲ್ಲಿ ಒಂದಾಗಿದೆ. ಹರ ಮತ್ತು ಹರಿ ಮೂರ್ತಿ ಪರಸ್ಪರ ಮುಖಾಮುಖಿಯಾಗಿ ಸ್ಥಾಪನೆಗೊಂಡಿರುವ ಭಾರತದ ಏಕೈಕ ದೇವಸ್ಥಾನ ಎನ್ನುವ ಹೆಗ್ಗಳಿಕೆಯೂ ಈ ದೇವಸ್ಥಾನಕ್ಕಿದೆ.
ಕ್ರಿ.ಶ 1500ರಲ್ಲಿ ಇಂದಿನ ದೇವಸ್ಥಾನ ಪ್ರದೇಶದಲ್ಲಿ ಕಪಿಲ ಮುನಿಗಳು ತಪಸ್ಸು ಮಾಡಿ ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಅವರ ಶಕ್ತಿಯಿಂದಲೇ ಶಿವನ ಮೂರ್ತಿ ಉದ್ಭವಗೊಂಡ ಕಾರಣದಿಂದ ಶಿವನ ದೇವಸ್ಥಾನಕ್ಕೆ ಕಪಿಲೇಶ್ವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಉತ್ತರದ ಕಾಶಿನಾಥ ದೇವಸ್ಥಾನದಷ್ಟೇ ಮಹತ್ವ ಹೊಂದಿರುವುದರಿಂದ ಈ ದೇವಸ್ತಾನಕ್ಕೆ ದಕ್ಷಿಣದ ಕಾಶಿ ಎಂತಲ್ಲೂ ಕರೆಯುತ್ತಾರೆ.
ದೇವಸ್ಥಾನದ ಒಳ- ಹೊರನೋಟ:
ಪೂರ್ವಾಭಿಮುಖದ ದೇಗುಲ ಎರಡಂತಸ್ತಿನ ಛಾವಣಿ ಹೊಂದಿದೆ. ಗರ್ಭಗೃಹ, ಅಂತರಾಳ, ನವರಂಗ, ಸಭಾ ಮಂಟಪ ಮತ್ತು ಪ್ರದಕ್ಷಿಣ ಪಥಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ದೇವಾಲಯದ ಎಡ ಪಾರ್ಶ್ವದಲ್ಲಿ ನವ ಗೃಹ ಮಂದಿರವಿದೆ. ಹೊರ ಆವರಣದಲ್ಲಿ ಶಿವ, ವೀರಭದ್ರ, ಕಾಳ ಭೈರವ ಮತ್ತು ಅನೇಕ ನಾಗಶಿಲ್ಪಗಳಿವೆ. 11ನೇ ಶತಮಾನಕ್ಕೆ ಸೇರಿದ ನಿಂತ ಭಂಗಿಯಲ್ಲಿರುವ ಚತುರ್ಭುಜಧಾರಿ ಕಾಳಭೈರವ ಮೂರ್ತಿ ತೆರೆದ ಗರ್ಭಗೃಹದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿದೆ. ದೇವಾಲಯ ಆವರಣದಲ್ಲಿ ದತ್ತ ಮಂದಿರ, ಸಾಯಿ ಮಂದಿರ, ಗಣೇಶ ಮಂದಿರ, ನಾಗ ದೇವತೆ ಮೂರ್ತಿಗಳು ನಿರ್ಮಾಣಗೊಂಡಿವೆ.
ಭಾವುಕರ ಭೂ ಕೈಲಾಸ ಎನಿಸಿಕೊಂಡಿರುವ ಕಪಿಲೇಶ್ವರ ದೇವಸ್ಥಾನಕ್ಕೆ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ರಾಜ್ಯದಲ್ಲೂ ಕಪಿಲೇಶ್ವರನ ಭಕ್ತರಿದ್ದಾರೆ. ಉತ್ತರ ಭಾರತದಿಂದಲೂ ಭಕ್ತರು ಕಪಿಲೇಶ್ವರ ದರ್ಶನಕ್ಕೆ ಬರಲಿದ್ದಾರೆ. ಪ್ರತಿ 12 ವರ್ಷಕ್ಕೋಮ್ಮೆ ಕಪಿಲೇಶ್ವರ ದೇವಸ್ಥಾನಕ್ಕೆ ನಾಗಾ ಸಾಧುಗಳು ಬಂದು ನಾಲ್ಕು ದಿನಗಳ ಕಾಲ ಪೂಜೆ ಮಾಡುತ್ತಾರಂತೆ. ಹೀಗಾಗಿ ಸಾಕಷ್ಟು ವೈಶಿಷ್ಟ್ಯ ಮತ್ತು ಶಕ್ತಿಯನ್ನು ಹೊಂದಿರುವ ಈ ದೇವಸ್ಥಾನಕ್ಕೆ ಭಕ್ತರು ಸಂಖ್ಯೆ ಹೆಚ್ಚಾಗಿದೆ.