ಮುಂಬೈ (ಮಹಾರಾಷ್ಟ್ರ): ನಾವು ಬೆಳಗಾವಿಯ ಕೆಲವು ಭಾಗಗಳು ಸೇರಿದಂತೆ ಹಲವು ಪ್ರದೇಶಗಳನ್ನು ಆದಷ್ಟು ಬೇಗ ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆ ಎಂದು ಏಕನಾಥ್ ಶಿಂಧೆ ಹಾಗೂ ಚಗನ್ ಭುಜ್ಪಾಲ್ ಗಡಿ ಪ್ರದೇಶದ ಜನರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಪ್ರಕರಣದ ಸಂಯೋಜಕರಾದ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾದ ಇವರು ಈ ಪ್ರಯತ್ನ ಯಶಸ್ವಿಯಾದ ದಿನ ಅದು ಐತಿಹಾಸಿಕವಾಗಿರುತ್ತದೆ. ಆ ದಿನದವರೆಗೂ ನಾವು ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಎರಡೂ ರಾಜ್ಯಗಳ ಗಡಿಯಲ್ಲಿರುವ ಜನರಿಗೆ ಪತ್ರ ಬರೆದಿದ್ದಾರೆ.
ಇದರ ಜೊತೆಗೆ ಮಹಾರಾಷ್ಟ್ರ ರಚನೆಯಾದಾಗ ಮುಂಬೈ ಅನ್ನು ಸೇರಿಸಿಕೊಂಡೆವು. ದುರಾದೃಷ್ಟವಶಾತ್ ದಕ್ಷಿಣದ ಕೆಲವು ಗ್ರಾಮಗಳನ್ನು ಸೇರಿಸಿಕೊಳ್ಳಲಾಗಲಿಲ್ಲ. ಸುಮಾರು 6 ದಶಕಗಳಿಂದ ನಾವು ಹೋರಾಡುತ್ತಿದ್ದೇವೆ. ಶೀಘ್ರವಾಗಿ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮುಂತಾದ ಪ್ರದೇಶಗಳನ್ನು ಮಹಾರಾಷ್ಟ್ರದೊಳಗೆ ಸೇರಿಸಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ವಾಸಿಸುತ್ತಿರುವ ಮರಾಠಿ ಜನರಿಗೆ ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಲಾಗಿದೆ. ಈ ದಿನದಂದು ಮಹಾರಾಷ್ಟ್ರದ ಎಲ್ಲಾ ಸಚಿವರು ಕಪ್ಪು ರಿಬ್ಬನ್ಗಳನ್ನು ಧರಿಸಿ ಕೆಲಸ ನಿರ್ವಹಿಸಲು ನಿರ್ಧರಿಸಲಾಗಿದೆ.