ಬೆಳಗಾವಿ: ನಾಡದ್ರೋಹಿ ಎಂಇಎಸ್ ಮನವಿ ಮೇರೆಗೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಡಿಸೆಂಬರ್ 3 ಕ್ಕೆ ಬೆಳಗಾವಿ ಭೇಟಿ ಖಚಿತವಾಗಿದೆ.
ಗಡಿವಿವಾದದ ಉರಿಯೋ ಬೆಂಕಿಗೆ ಮಹಾರಾಷ್ಟ್ರ ಸರ್ಕಾರ ತುಪ್ಪ ಸುರಿಯುತ್ತಿದೆ. ಸಚಿವ ಚಂದ್ರಕಾಂತ ಪಾಟೀಲ ಪ್ರವಾಸ ಪಟ್ಟಿ ಬಿಡುಗಡೆ ಆಗಿದೆ. ಅವರ ಪ್ರವಾಸ ಪಟ್ಟಿ ಕರ್ನಾಟಕ ಮುಖ್ಯಕಾರ್ಯದರ್ಶಿಗೆ ರವಾನೆ ಮಾಡಲಾಗಿದೆ.
ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ ಡಿಸೆಂಬರ್ 3ರ ಬೆಳಗ್ಗೆ 11ಕ್ಕೆ ಬೆಳಗಾವಿಗೆ ಆಗಮಿಸಲಿರುವ ಸಚಿವ ಚಂದ್ರಕಾಂತ ಪಾಟೀಲ್ ಬೆಳಗಾವಿ ಹಾಗೂ ಗಡಿಭಾಗದ ಗ್ರಾಮಗಳಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟ ಮರಾಠಿ ಭಾಷಿಕರ ಕುಟುಂಬಸ್ಥರನ್ನೂ ಸಚಿವ ಚಂದ್ರಕಾಂತ ಭೇಟಿ ಆಗಲಿದ್ದಾರೆ.
ಹುತಾತ್ಮ ಸ್ಮಾರಕಕ್ಕೆ ಭೇಟಿ: ಈ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಡಿ. 3ರ ಬೆಳಗ್ಗೆ 11ಕ್ಕೆ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನಕ್ಕೆ ಭೇಟಿ ನೀಡಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಗಡಿಹೋರಾಟ ವೇಳೆ ಗಲಭೆ ಸೃಷ್ಟಿಸಿ ಮೃತಪಟ್ಟವರ ಸ್ಮರಣಾರ್ಥ ಹಿಂಡಲಗಾ ಗ್ರಾಮದ ಬಳಿ ನಿರ್ಮಿಸಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 11.35ಕ್ಕೆ ಬೆಳಗಾವಿಯ ಎಂಇಎಸ್ ಕಚೇರಿಗೆ ಭೇಟಿ ನೀಡಲಿರುವ ಸಚಿವ ಚಂದ್ರಕಾಂತ ಪಾಟೀಲ್ ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 11.55ಕ್ಕೆ ತುಕಾರಾಮ ಮಹಾರಾಜ ಸಾಂಸ್ಕೃತಿಕ ಕಾರ್ಯಾಲಯಕ್ಕೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1. 30ಕ್ಕೆ ಎಂಇಎಸ್ ಮುಖಂಡ ಪ್ರಕಾಶ್ ಮರಗಾಳೆ ನಿವಾಸ ಹಾಗೂ ಗಡಿ ಹೋರಾಟದಲ್ಲಿ ಮೃತಪಟ್ಟ ಮಧು ಬಾಂದೇಕರ್, ವಿದ್ಯಾ ಶಿಂಧೋಳಕರ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಸಚಿವ ಪಾಟೀಲರಿಂದ ಸರಣಿ ಸಭೆ: ಮಧ್ಯಾಹ್ನ 3.15ಕ್ಕೆ ಹಳೆಯ ಬೆಳಗಾವಿಯಲ್ಲಿ ಸಚಿವ ಚಂದ್ರಕಾಂತ ಪಾಟೀಲ್ ರೌಂಡ್ಸ್ ಹಾಕಲಿದ್ದಾರೆ. ಬಳಿಕ ಸಂಜೆ 6 ಗಂಟೆಯವರೆಗೂ ಗಡಿ ಭಾಗದ ಗ್ರಾಮಗಳಲ್ಲಿ ಸರಣಿ ಸಭೆ ನಡೆಸಲಿದ್ದಾರೆ. ಸುಳಗಾ, ಉಚಗಾಂವ, ಬೆಳಗುಂದಿ, ಹಿಂಡಲಗಾದ ವಿಜಯನಗರ, ಕಂಗ್ರಾಳಿ ಕೆ. ಹೆಚ್ ಗ್ರಾಮಗಳಿಗೆ ಭೇಟಿ ನೀಡಿ ಸಚಿವ ಪಾಟೀಲ ಸರಣಿ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಓದಿ:ತರ್ಲೆ ಮಾಡಿದ್ರೆ ಕಠಿಣ ಕ್ರಮ: ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್ ಕುಮಾರ್ ವಾರ್ನಿಂಗ್