ಬೆಳಗಾವಿ :ಗಡಿ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಎಂಇಎಸ್ ನಾಯಕರು ಬೆಳಗಾವಿ ಮಹಾನಗರ ಪಾಲಿಕೆಯನ್ನು ಮರಳಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ತೀವ್ರ ಕಸರತ್ತು ಆರಂಭಿಸಿದ್ದಾರೆ.
ಗಡಿವಿವಾದದ ಹೆಸರಲ್ಲೇ ಈವರೆಗೆ ರಾಜಕಾರಣ ಮಾಡುತ್ತ ಬಂದಿರುವ ಎಂಇಎಸ್ ಈ ಸಲವೂ ಅದೇ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಅಲ್ಲದೇ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲಿರುವ ತಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸುವಂತೆ ಮಹಾರಾಷ್ಟ್ರದ ಘಟಾನುಘಟಿ ನಾಯಕರಿಗೆ ಆಹ್ವಾನ ನೀಡಿದ್ದಾರೆ.
ಎಂಇಎಸ್ ಅಭ್ಯರ್ಥಿಗಳ ಪರ 'ಮಹಾ' ನಾಯಕರ ಪ್ರಚಾರ.. ಮಹಾರಾಷ್ಟ್ರ ಸರ್ಕಾರದ ಡಿಸಿಎಂ ಅಜಿತ್ ಪವಾರ್ ಹಾಗೂ ಶಿವಸೇನೆ ವಕ್ತಾರ ಸಂಜಯ್ ರಾವತ್ ಸೇರಿದಂತೆ ಹಲವು ನಾಯಕರು ಚುನಾವಣಾ ಪ್ರಚಾರಕ್ಕಾಗಿ ಬೆಳಗಾವಿಗೆ ಆಗಮಿಸಲಿದ್ದಾರೆ. ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ಮತ್ತೆ ಗಡಿವಿವಾದ ಕೆದಕಿರುವ ಎಂಇಎಸ್ ಕಾರ್ಯಕರ್ತರಿಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಕೂಡ ಸಾಥ್ ನೀಡಿದ್ದಾರೆ. ಇತ್ತ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಗಡಿ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ಪ್ರಧಾನಿಗೆ ಪತ್ರ ಚಳವಳಿ ಆರಂಭಿಸಿದ್ದರೆ, ಅತ್ತ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಕೂಡ ಪ್ರಧಾನಿಗೆ ಪತ್ರ ಬರೆದು ಗಡಿ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆವಹಿಸಿ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾರೆ.
ಫಲ ನೀಡುವುದೇ ಮಿಷನ್ 40? : 58 ವಾರ್ಡ್ ವ್ಯಾಪ್ತಿ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಎರಡೂವರೆ ವರ್ಷ ತಡವಾಗಿ ಚುನಾವಣೆ ನಡೆಯುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು 32 ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಆದರೆ, ಎಂಇಎಸ್ ಯುವ ಸಮಿತಿ ಈಗಾಗಲೇ 'ಮಿಷನ್ 40' ಎಂಬ ಅಭಿಯಾನ ಆರಂಭಿಸಿದೆ. ಗಡಿವಿವಾದ, ಮರಾಠಿ ಭಾಷಿಕರ ಮೇಲೆ ಕರ್ನಾಟಕ ಸರ್ಕಾರ ಮಾಡುತ್ತಿರುವ ಅನ್ಯಾಯ ಹೀಗೆ ಹಲವು ಹಸಿ ಸುಳ್ಳುಗಳನ್ನು ಒಳಗೊಂಡಿರುವ ಭಿತ್ತಿಪತ್ರಗಳನ್ನು ಹಂಚಲು ನಿರ್ಧರಿಸಿದೆ.
ಹಸಿ ಸುಳ್ಳಿಗೆ ಮರಳಾಗುವುದು ಬೇಡ : ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ಬದಲಿಗೆ ಭಗವಾಧ್ವಜ ಅಳವಡಿಸಲು ಎಂಇಎಸ್ ಬೆಂಬಲಿಸುವಂತೆ ಕೋರುತ್ತಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರದ ಘಟಾನುಘಟಿ ನಾಯಕರನ್ನು ಬೆಳಗಾವಿಗೆ ಆಹ್ವಾನಿಸಿ ಈ ಎಲ್ಲ ವಿಷಯಗಳನ್ನು ಪ್ರಚಾರ ಭಾಷಣದಲ್ಲಿ ಉಲ್ಲೇಖಿಸುವಂತೆ ಮನವಿ ಮಾಡಿದ್ದಾರೆ.
ರಾಜಕೀಯ ದುರುದ್ದೇಶಕ್ಕಾಗಿ ಗಡಿವಿವಾದ ಪ್ರಸ್ತಾಪಿಸುತ್ತಿರುವ ಸಂಗತಿಯೂ ಇಲ್ಲಿನ ಮುಗ್ಧ ಮರಾಠಿ ಭಾಷಿಕರಿಗೆ ಗೊತ್ತಿದೆ. ಕರ್ನಾಟಕ ಸರ್ಕಾರ ಬೆಳಗಾವಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ಎಂಇಎಸ್‍ನ ಹಸಿಸುಳ್ಳಿಗೆ ಮರಳಾಗುವುದು ಬೇಡ ಎಂಬುದು ಬಹುಸಂಖ್ಯಾತರ ಅಭಿಪ್ರಾಯ. ಹೀಗಾಗಿ, ಎಂಇಎಸ್‍ನ ಮಿಷನ್ 40 ಅಭಿಯಾನಕ್ಕೆ ಫಲ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
'ಮಹಾ' ನಾಯಕರಿಗೂ ಅನಿವಾರ್ಯ :ಶಿವಸೇನೆ ಹಾಗೂ ಎನ್‍ಸಿಪಿ ಮೊದಲಿನಿಂದಲೂ ಭಾಷೆ ಹಾಗೂ ಗಡಿ ಹೆಸರಿನಲ್ಲೇ ರಾಜಕಾರಣ ಮಾಡುತ್ತ ಬಂದಿವೆ. ಇದೀಗ ಕಾಂಗ್ರೆಸ್ ಜತೆ ಸೇರಿ ಈ ಎರಡೂ ಪಕ್ಷಗಳು ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸುತ್ತಿವೆ. ಹೀಗಾಗಿ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕೆ ಆಗಮಿಸಲು ಮಹಾರಾಷ್ಟ್ರ ಸರ್ಕಾರದ ಭಾಗವಾಗಿರುವ ಎರಡೂ ಪಕ್ಷಗಳ ನಾಯಕರು ಉತ್ಸುಕರಾಗಿದ್ದಾರೆ. ಪಾಲಿಕೆ ಎದುರು ಅಳವಡಿಸಲಾಗಿರುವ ಕನ್ನಡಧ್ವಜ ಸ್ತಂಭದ ವಿರುದ್ಧ ಬೆಳಗಾವಿಯಲ್ಲಿರುವ ಎಂಇಎಸ್, ಶಿವಸೇನೆ ನಾಯಕರಿಗಿಂತ ಮಹಾರಾಷ್ಟ್ರ ನಾಯಕರೇ ಹೆಚ್ಚು ಪ್ರತಿಭಟನೆ ನಡೆಸಿದ್ದಾರೆ.
ಕನ್ನಡ ಧ್ವಜವೇ ಮಹಾ ನಾಯಕರ ಅಸ್ತ್ರ :ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕೂಡ ಕನ್ನಡಧ್ವಜಸ್ತಂಭ ವಿಷಯವನ್ನೇ ಮುಂದಿಟ್ಟುಕೊಂಡು ಎಂಇಎಸ್ ಚುನಾವಣೆ ಎದುರಿಸಿ ಒಂದು ಲಕ್ಷಕ್ಕೂ ಅಧಿಕ ಮತ ಪಡೆದಿದೆ. ಆಗಲೂ ಶಿವಸೇನೆ ವಕ್ತಾರ ಸಂಜಯ್ ರಾವತ್ ಸೇರಿ ಮಹಾರಾಷ್ಟ್ರದ ಹಲವು ನಾಯಕರು ಪ್ರಚಾರಕ್ಕೆ ಆಗಮಿಸಿದ್ದರು. ಇದೀಗ ಮಹಾನಗರ ಪಾಲಿಕೆ ಚುನಾವಣೆಯನ್ನು ಕನ್ನಡಧ್ವಜ ಸ್ತಂಭ ಅಳವಡಿಕೆ ವಿಷಯ ಪ್ರಸ್ತಾಪಿಸಿಯೇ ಮುಗ್ಧ ಮರಾಠಿಗರನ್ನು ಪ್ರಚೋದಿಸುವ ಕೆಲಸಕ್ಕೆ ಎಂಇಎಸ್ ತಂತ್ರ ರೂಪಿಸಿದೆ. ಹೀಗಾಗಿ, ಮಹಾರಾಷ್ಟ್ರ ನಾಯಕರಿಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮಹತ್ವದ್ದಾಗಿದೆ.