ಅಥಣಿ: ಮಹಾರಾಷ್ಟ್ರದ ಜತ್ ತಾಲೂಕಿನ ಬಿಳ್ಳೂರು ಗ್ರಾಮಸ್ಥನೊಬ್ಬನಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅಥಣಿ ಜನರು ಆತಂಕಗೊಂಡಿದ್ದಾರೆ.
ಮಹಾರಾಷ್ಟ್ರದ ಬಿಳ್ಳೂರು ಗ್ರಾಮಸ್ಥನೊಬ್ಬ ಅನಾರೋಗ್ಯದ ಹಿನ್ನೆಲೆ ಇದೇ ತಿಂಗಳ 19 ರಂದು ಅಥಣಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರು ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕಳೆದ 26 ರಂದು ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಅಲ್ಲಿನ ಜಿಲ್ಲಾಡಳಿತ ಶಂಕಿತನ ಟ್ರಾವೆಲ್ ಹಿಸ್ಟರಿ ನೋಡಿದಾಗ ಅಥಣಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿರುವುದು ಗೊತ್ತಾಗಿದೆ. ಈ ಕುರಿತು ಅಥಣಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದು, ಸೋಂಕಿತ ಭೇಟಿ ನೀಡಿದ್ದ ಖಾಸಗಿ ಆಸ್ಪತ್ರೆಯನ್ನು ಶನಿವಾರ ರಾತ್ರಿ ಸೀಲ್ ಡೌನ್ ಮಾಡಲಾಗಿದೆ.
ಈಗಾಗಲೇ ಸೋಂಕಿತನೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ 18 ಜನ ಸಿಬ್ಬಂದಿ ಹಾಗೂ ಓರ್ವ ವೈದ್ಯರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಮುತ್ತಣ್ಣ ಕೊಪ್ಪದ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಅಥಣಿಯಲ್ಲಿ ಪ್ರಥಮವಾಗಿ ಕಳೆದ ಮೇ 27 ರಂದು ಜಾರ್ಖಂಡ್ ಪ್ರವಾಸದಿಂದ ಮರಳಿ ಬಂದವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಅವತ್ತಿನಿಂದ ಇವತ್ತಿನವರೆಗೆ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗದೇ ಜನ ನೆಮ್ಮದಿಯಿಂದ ಇದ್ದರು. ಇದೀಗ ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ ಮತ್ತೆ ಅಥಣಿಯಲ್ಲಿ ಮತ್ತೆ ಆತಂಕ ಶುರುವಾಗಿದೆ.