ಬೆಳಗಾವಿ: ಇತ್ತೀಚಿಗೆಯಷ್ಟೇ ಬೆಳಗಾವಿ ಗಡಿ ಬಗ್ಗೆ ಕ್ಯಾತೆ ತೆಗೆದಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಇದೀಗ ಮತ್ತೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಗಡಿ ವಿವಾದ ಸಂಬಂಧ ರಚಿಸಿರುವ ಹೈ ಪವರ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ಉದ್ಧವ್ ಠಾಕ್ರೆ 'ಉದ್ಧ'ಟತನ: ಮತ್ತೆ ವಿವಾದಕ್ಕೆ ಎಡೆ ಮಾಡಿಕೊಡುತ್ತಾ 'ಮಹಾ' ಸಿಎಂ ನಡೆ
09:55 January 27
ಕರ್ನಾಟಕದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾದ ಕಮಿಟಿಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಅಷ್ಟೇ ಅಲ್ಲದೆ, ಗಡಿ ವಿವಾದಕ್ಕೆ ಸಂಬಂಧಿಸಿದ ವಿವಾದಿತ ಪುಸ್ತಕ ಇಂದು ಮಧ್ಯಾಹ್ನ 12 ಗಂಟೆಗೆ ಮುಂಬೈನಲ್ಲಿ ಸಿಎಂ ಉದ್ಧವ್ ಠಾಕ್ರೆ ಬಿಡುಗಡೆ ಮಾಡಲಿದ್ದಾರೆ. 1956 ರಿಂದ 2021ರವರೆಗಿನ ಗಡಿವಿವಾದ ಘಟನಾವಳಿಗಳು, ಮಹಾರಾಷ್ಟ್ರದ ನಿಲುವುಗಳ ಬಗ್ಗೆ ಒಳಗೊಂಡ ಲೇಖನಗಳ ಪುಸ್ತಕ ಇದಾಗಲಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ 2004ರಿಂದಲೂ ಸುಪ್ರೀಂಕೋರ್ಟ್‌ನಲ್ಲಿದೆ. ಆದರೆ ಈ ವಿವಾದಿತ ಪುಸ್ತಕ ಬಿಡುಗಡೆಯಾಗುತ್ತಿದ್ದು, ಉಭಯ ರಾಜ್ಯಗಳ ಮಧ್ಯೆ ಮತ್ತೆ ಸಂಘರ್ಷದ ಕಿಡಿ ಹೊತ್ತುವ ಸಾಧ್ಯತೆಯಿದೆ.
ಪುಸ್ತಕ ಬಿಡುಗಡೆ ಬಳಿಕ ಸಿಎಂ ಹೈ ಪವರ್ ಕಮೀಟಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.