ಬೆಳಗಾವಿ: ಸುಪ್ರೀಂ ಕೋರ್ಟ್ ಹೊರಗೆ ಮಹದಾಯಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ಮುಖಂಡರ ಯತ್ನಕ್ಕೆ ಹಿನ್ನಡೆ ಆಗಿದೆ.
ಯೋಜನೆ ಜಾರಿ ಸಂಬಂಧ ಕರ್ನಾಟಕ ಹಾಗೂ ಗೋವಾ ಸಿಎಂ ನಡುವೆ ಪಣಜಿಯಲ್ಲಿ ಇಂದು ಮಾತುಕತೆ ನಿಗದಿ ಆಗಿತ್ತು. ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಈ ಸಂಬಂಧ ಎರಡು ದಿನಗಳ ಹಿಂದೆಯೇ ಮಹದಾಯಿ ಯೋಜನೆ ಸಂಬಂಧ ಕರ್ನಾಟಕ ಸಿಎಂ ಜೊತೆ ಮಾತುಕತೆಯ ಪ್ರಸ್ತಾಪವೇ ನನ್ನ ಮುಂದಿಲ್ಲ ಎಂದು ಗೋವಾ ಸಿಎಂ ಅಲ್ಲಿನ ಮಾಧ್ಯಮಗಳಿಗೆ ಹೇಳಿಕೆ ನೀಡಿ ಜಾರಿಕೊಂಡಿದ್ದಾರೆ.
ಹೀಗಾಗಿ ಕರ್ನಾಟಕ ಸಿಎಂ ಯಡಿಯೂರಪ್ಪ ಅವರ ಗೋವಾ ಪ್ರವಾಸ ಎರಡು ದಿನಗಳ ಹಿಂದೆಯೇ ರದ್ದಾಗಿದೆ. ಕೇಂದ್ರ ಸಂಸದೀಯ ಖಾತೆಯ ಸಚಿವ ಪ್ರಹ್ಲಾದ್ ಜೋಶಿ ಅವರು ನ್ಯಾಯಾಲಯದ ಹೊರಗೆ ವಿವಾದದ ಇತ್ಯರ್ಥಕ್ಕಾಗಿ ಸಾವಂತ ಅವರೊಂದಿಗೆ ಚರ್ಚಿಸಿ, ಯಡಿಯೂರಪ್ಪ ಅವರ ಜೊತೆ ಈ ಬಗ್ಗೆ ಮಾತನಾಡಿದ್ದರು. ಆ ನಂತರವೇ ಯಡಿಯೂರಪ್ಪ ಅವರು ಶನಿವಾರ ಪಣಜಿಗೆ ಹೋಗುತ್ತಿರುವುದಾಗಿ ಮಂಗಳವಾರ ಪ್ರಕಟಿಸಿದ್ದರು.
ಯಡಿಯೂರಪ್ಪ ಅವರು ಹೇಳಿಕೆ ನೀಡುತ್ತಿದ್ದಂತೆ ಗೋವಾ ಮಾಜಿ ಸಿಎಂ ದಿಗಂಬರ ಕಾಮತ್ ಮತ್ತಿತರರು ಸಿಎಂ ಪ್ರಮೋದ್ ಸಾವಂತ ಮೇಲೆ ಮುಗಿಬಿದ್ದು, ಗೋವಾ ಹಿತವನ್ನು ಬಲಿಕೊಟ್ಟು ಕರ್ನಾಟಕದೊಂದಿಗೆ ಮಾತುಕತೆ ನಡೆಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದರು.
ಕಾಂಗ್ರೆಸ್ಸಿಗರ ಎಚ್ಚರಿಕೆಗೆ ಮಣಿದಿರುವ ಪ್ರಮೋದ ಸಾವಂತ, ಯಡಿಯೂರಪ್ಪ ಅವರ ಜೊತೆಗಿನ ಮಾತುಕತೆಯಿಂದ ಹಿಂದೆ ಸರಿದಿದ್ದಾರೆ. 2018 ರ ಆಗಸ್ಟ್ 14 ರಂದು ಮಹದಾಯಿ ನ್ಯಾಯಮಂಡಳಿಯು ತನ್ನ ಅಂತಿಮ ತೀರ್ಪು ನೀಡಿದ್ದು, ಅದು ಇನ್ನೂ ಕೇಂದ್ರದ ಅಧಿಸೂಚನೆಯಲ್ಲಿ ಪ್ರಕಟಗೊಳ್ಳಬೇಕಾಗಿದೆ. ಈ ಮಧ್ಯೆ ಕಳೆದ ನವೆಂಬರ್ನಲ್ಲಿ ಗೋವಾ ಮತ್ತು ಕರ್ನಾಟಕ ಸರ್ಕಾರವು ನ್ಯಾಯಮಂಡಳಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿವೆ.
ಮಹಾದಾಯಿ ನದಿಯಲ್ಲಿನ 188 ಟಿಎಂಸಿ ನೀರಿನಲ್ಲಿ ಕರ್ನಾಟಕಕ್ಕೆ 13.5, ಗೋವಾಗೆ 24 ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರನ್ನು ಪಾಂಚಾಲ ನ್ಯಾಯಮಂಡಳಿ ಹಂಚಿಕೆ ಮಾಡಿದೆ. ಇನ್ನೂ ಸುಮಾರು 148 ಟಿಎಂಸಿ ನೀರು ಹಂಚಿಕೆಯಾಗಬೇಕಾಗಿದೆ. ನ್ಯಾಯಾಲಯದ ಹೊರಗೆ ವಿವಾದವನ್ನು ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ, ಅದರಲ್ಲೂ ವಿಶೇಷವಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಯತ್ನಿದ್ದರು. ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳೇ ಇರುವುದರಿಂದ ವಿವಾದವು ನ್ಯಾಯಾಲಯದ ಹೊರಗೆ ಇತ್ಯರ್ಥವಾಗಬೇಕೆಂಬುದು ಹೋರಾಟಗಾರರ ಒತ್ತಾಯವಾಗಿದೆ. ಸಾವಂತ ಅವರು ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕೇಂದ್ರವು ಯಾವ ನಿಲುವು ತಳೆಯಬಹುದು ಎಂಬುದನ್ನು ಕಾದು ನೋಡಬೇಕಿದೆ.