ಬೆಳಗಾವಿ:ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧಿಸಿ ಹೀರೋ ಮಾಡುವ ಅಗತ್ಯ ನಮಗಿಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ ಇಲಾಖೆಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧನ ಮಾಡಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ. ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿ.ಕೆ.ಶಿವಕುಮಾರ್ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನ ಬಂಧನ ಮಾಡಿಸಿ ಹೀರೋ ಮಾಡಿಸುವ ಅಗತ್ಯವೇ ಇಲ್ಲ ಎಂದು ಪ್ರತಿಕ್ರಿಯಿಸಿದರು.
ಡಿಸಿಎಂ ಹುದ್ದೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮೂರು ಡಿಸಿಎಂ ಹುದ್ದೆ ನೀಡಿರುವುದು ಬಿಜೆಪಿ ಹೈಕಮಾಂಡ್ಗೆ ಬಿಟ್ಟಿದ್ದು. ಆದರೆ ರಾಜಕಾರಣದಲ್ಲಿ ಎಲ್ಲರಿಗೂ ಆಸೆ ಇರುತ್ತದೆ. ಹಿರಿಯರು ಇರುತ್ತಾರೆ. ಆಯಾ ಜಿಲ್ಲೆಯ ಪ್ರಾಂತ್ಯಗಳನ್ನು ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲವನ್ನು ಅಳೆದು ತೂಗಿ ಸಚಿವರನ್ನು ನೇಮಕ ಮಾಡಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯ ಪ್ರವಾಹದಲ್ಲಿ ಸಣ್ಣ ನೀರಾವರಿಗೆ ಸೇರಿದಂತೆ ಕೆರೆಗಳು ಹಾನಿಯಾಗಿರುವ ಕುರಿತು ನಾನೇ ಸ್ವತಃ ಪರಿಶೀಲನೆ ನಡೆಸಲಿದ್ದೇನೆ. ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿದಿಗಳ ಜತೆ ಸಭೆ ನಡೆಸಲಿದ್ದೇನೆ ಎಂದರು.