ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ಭೂ ನಿಗಮವು ರಸ್ತೆ ನಿರ್ಮಾಣ ಕಾಮಗಾರಿಗಾಗಿ ರೈತರ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಕೃಷಿ ಜಮೀನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿ ನಗರದ ಮಚ್ಛೆ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಮಚ್ಛೆ - ಹಲಗಾ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೃಷಿ ಜಮೀನು ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ರಾಷ್ಟ್ರೀಯ ಹೆದ್ದಾರಿ ಭೂ ನಿಗಮದಿಂದ ರೈತರ ಒಪ್ಪಿಗೆ ಪಡೆಯದೇ ಕಾಮಗಾರಿ ಕೆಲಸವನ್ನು ಆರಂಭಿಸುತ್ತಿದ್ದಾರೆ. ಈ ಭಾಗದಲ್ಲಿ 1,047 ರೈತರಿದ್ದು, ಎಲ್ಲರೂ ಅತಿಸಣ್ಣ ರೈತರು. ಕುಟುಂಬ ನಿರ್ವಹಣೆಗಾಗಿ ಇದೇ ಜಮೀನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಅಧಿಕಾರಿಗಳ ಕಿರಿಕಿರಿಯಿಂದ ಹಲವು ವರ್ಷಗಳಿಂದ ಹೋರಾಟ ಮಾಡಿ ರಸ್ತೆ ಕಾಮಗಾರಿಗೆ ಹೈಕೋರ್ಟ್‍ನಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಇಂದು ನೂರಾರು ಪೊಲೀಸರೊಂದಿಗೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೆಸಿಬಿ, ಯಂತ್ರೋಪಕರಣಗಳ ಸಮೇತ ದಬ್ಬಾಳಿಕೆ ಮಾಡುವ ಮೂಲಕ ಕಾಮಗಾರಿಗೆ ಮುಂದಾಗಿದ್ದಾರೆ. ಇನ್ನು ಈ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.