ಬೆಳಗಾವಿ:ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ಕೈ ತಪ್ಪಿದಕ್ಕೆ ಅಸಮಾಧಾನಗೊಂಡ ಸ್ಥಳೀಯರು ಸದಸ್ಯರ ಕಾರು ತಡೆದು ಹೈಡ್ರಾಮಾ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂಜಿನಕೊಡಲ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಕೈ ತಪ್ಪಿದ ಅಧ್ಯಕ್ಷ ಸ್ಥಾನ: ಸದಸ್ಯರ ಕಾರು ತಡೆದು ಸ್ಥಳೀಯರಿಂದ ಹೈಡ್ರಾಮಾ ನಂಜಿನಕೊಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಗ್ರಾಮಗಳು ಬರುತ್ತವೆ. ನಂಜಿನಕೊಡಲ ಗ್ರಾಮದ ಜೊತೆಗೆ ಸಾಗರೆ, ಜುಂಜವಾಡ, ಕೊಂಚಿಕೊಪ್ಪ, ಗದ್ದಿಬೈಲ ಗ್ರಾಮಗಳು ಸೇರಿವೆ. ನಿನ್ನೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿತ್ತು. ಸದಸ್ಯರೆಲ್ಲರೂ ಸೇರಿ ಅವಿರೋಧ ಆಯ್ಕೆಗೆ ನಿರ್ಣಯ ಕೈಗೊಂಡಿದ್ದರು. ಸಾಗರೆ ಗ್ರಾಮದ ಜಾನವ್ ಪಾಟೀಲ್ ಗ್ರಾ.ಪಂ. ಅಧ್ಯಕ್ಷರಾಗಿ, ನಂಜಿನಕೊಡಲ ಗ್ರಾಮದ ಜಯಶ್ರೀ ಶಿಂಧೋಳಕರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಜುಂಜವಾಡ ಗ್ರಾಮದ ಜ್ಞಾನೇಶ್ವರ ಆಕಾಂಕ್ಷಿಯಾಗಿದ್ದರು. ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ಗ್ರಾ.ಪಂ.ಅಧ್ಯಕ್ಷ ಸ್ಥಾನ ಜುಂಜವಾಡ ಗ್ರಾಮಕ್ಕೆ ಒಲಿಯುತ್ತೆ ಎಂಬ ಆಶಾಭಾವನೆಯಲ್ಲಿದ್ದ ಗ್ರಾಮಸ್ಥರು ತಮ್ಮದೇ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಬೇರೆ ಗ್ರಾಮದ ಅಭ್ಯರ್ಥಿ ಬೆಂಬಲಿಸಿದ್ದಕ್ಕೆ ಜುಂಜವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಜುಂಜವಾಡ ಗ್ರಾಮಕ್ಕೆ ಅಧ್ಯಕ್ಷ ಸ್ಥಾನ ಕೈ ತಪ್ಪಿದಕ್ಕೆ ಸದಸ್ಯರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದ ಸದಸ್ಯರ ಕಾರು ತಡೆದು ಜುಂಜುವಾಡ ಗ್ರಾಮಸ್ಥರ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.