ಬೆಳಗಾವಿ:ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೋ ಅಥವಾ ಭ್ರಷ್ಟಾಚಾರದ ಪರ ಕೆಲಸ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 2022 ಮಾರ್ಚ್ 18 ರಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಕ್ಷನ್ ಮಾಡದೆ ಸೈಟ್ ಹಂಚಿಕೆ ಮಾಡಿರುವ ಕುರಿತು ನಗರ ಪೊಲೀಸ್ ಇಲಾಖೆ, ಲೋಕಾಯುಕ್ತಕ್ಕೆ ದೂರು ನೀಡಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿರಲಿಲ್ಲ. ಆದರೆ ನ್ಯಾಯಾಲಯ ಬುಡಾ ಆಯುಕ್ತ ಪ್ರೀತಂ ನಸಲಾಪುರೆ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.
ಲೋಕಾಯುಕ್ತಕ್ಕೆ ಕಳೆದ 9 ತಿಂಗಳ ಹಿಂದೆ ದೂರು ನೀಡಿದರೂ ಭ್ರಷ್ಟಾಚಾರ ನಡೆಸಿದ ಅಧಿಕಾರಿ ಮೇಲೆ ಎಫ್‌ಐಆರ್ ದಾಖಲಿಸಿರಲಿಲ್ಲ. ಈಗ ನ್ಯಾಯಾಲಯ ಆದೇಶ ನೀಡಿದೆ. ಇನ್ನಾದರೂ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವ ಕೆಲಸ ಬಿಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸರಕಾರಿ ಇಲಾಖೆಯ 50 ಲಕ್ಷ ರೂ. ಮೇಲ್ಪಟ್ಟ ಜಾಹೀರಾತುಗಳನ್ನು ಪ್ರಾದೇಶಿಕ ಪತ್ರಿಕೆಗಳಿಗೆ ನೀಡಲು ಬರುವುದಿಲ್ಲ. ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡಬೇಕು. ಅದು ವಾರ್ತಾ ಇಲಾಖೆಯಿಂದ ನೀಡಬೇಕು. ಆದರೆ ಬುಡಾ ಅಧಿಕಾರಿಗಳು ಎಲ್ಲಾ ಜಾಹೀರಾತು ನೀಡುವಾಗ ವಾರ್ತಾ ಇಲಾಖೆಯಿಂದ ನೀಡುತ್ತಾರೆ. ಆದರೆ ಬೆಳಗಾವಿ ಬುಡಾ ಅಧಿಕಾರಿಗಳು ನೇರವಾಗಿ ಪತ್ರಿಕೆಗೆ ಜಾಹೀರಾತು ನೀಡಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ, ಸರಕಾರದ ಕಣ್ಣಿಗೆ ಮಣ್ಣೇರಚ್ಚಿದ್ದಾರೆ ಎಂದು ರಾಜಕುಮಾರ ಟೋಪಣ್ಣವರ ಆರೋಪಿಸಿದ್ದಾರೆ.