ಕರ್ನಾಟಕ

karnataka

ETV Bharat / state

ಶಿಕ್ಷಣ ಸಂಸ್ಥೆಯ ಪರವಾನಗಿ ನವೀಕರಣಕ್ಕೆ ಲಂಚ: ಬೆಳಗಾವಿ ಡಿಡಿಪಿಐ ಲೋಕಾಯುಕ್ತ ಬಲೆಗೆ - ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ

ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ
ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ

By ETV Bharat Karnataka Team

Published : Oct 20, 2023, 3:37 PM IST

Updated : Oct 20, 2023, 7:48 PM IST

ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಡಿಡಿಪಿಐ ಬಸವರಾಜ ನಾಲತವಾಡ ಅವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಅಧಿಕಾರಿಯ ಕಚೇರಿ ಮೇಲೆ ಲೋಕಾಯುಕ್ತ ಎಸ್ಪಿ ಹಣಮಂತರಾಯ ನೇತೃತ್ವದ ತಂಡ ದಾಳಿ ಮಾಡಿದೆ. ಈ ವೇಳೆ ಡಿಡಿಪಿಐ ಬಸವರಾಜ ನಾಲತವಾಡ 40 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕಿತ್ತೂರು ತಾಲೂಕಿನ ತುರುಮುರಿ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಪರವಾನಗಿ ನವೀಕರಣ ಮಾಡಿಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಡಿಡಿಪಿಐ ವಿರುದ್ಧ ಶಾಲೆಯ ಮುಖ್ಯಸ್ಥ ಅರ್ಜುನ ಕುರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇಂದು ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದರು. ಲೋಕಾಯುಕ್ತ ಅಧಿಕಾರಿಗಳು‌ ಎರಡು ಗಂಟೆಗೂ ಹೆಚ್ಚು ಕಾಲ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ಲೋಕಾಯುಕ್ತರ ಪ್ರತಿಕ್ರಿಯೆ: 'ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಡಿಡಿಪಿಐ ಬಸವರಾಜ ನಾಲತವಾಡ ವಿರುದ್ಧ ಬೆಳಗಾವಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಸವರಾಜ ನಾಲತವಾಡ ಅವರನ್ನು ಬಂಧಿಸಿ, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ' ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಲೋಕಾಯುಕ್ತ ದಾಳಿ: ₹20 ಸಾವಿರ ಲಂಚ, ಸಿಕ್ಕಿಬಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್

ಬಿಲ್​ ರಿಪೋರ್ಟ್​ ನೀಡಲು ಲಂಚಕ್ಕೆ ಬೇಡಿಕೆ:ಮಂಗಳೂರಿನಲ್ಲಿ ರಸ್ತೆ ಕಾಮಗಾರಿಯೊಂದರ ಬಿಲ್ ಮಂಜೂರು ಮಾಡಲು ಅಗತ್ಯವಿರುವ ಸೈಟ್‌ನ ಮೆಟೀರಿಯಲ್ ಪರಿಶೀಲನೆ ಮಾಡಿ ನೀಡಬೇಕಾದ ವರದಿಗೆ 20 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದಾಗ ಕಿರಿಯ ಇಂಜಿನಿಯರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬುಧವಾರ ನಡೆದಿತ್ತು.

ಬೊಂದೆಲ್‌ನಲ್ಲಿನ ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗದ ಕಿರಿಯ ಇಂಜಿನಿಯರ್-2 ರೊನಾಲ್ಡ್ ಲೋಬೋ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ದೂರುದಾರರಾದ ಪ್ರಭಾಕರ ನಾಯ್ಕ ಎಂಬವರು ಲೋಕೋಪಯೋಗಿ ಇಲಾಖೆಯಲ್ಲಿ ಕ್ಲಾಸ್-2 ದರ್ಜೆಯ ಗುತ್ತಿಗೆದಾರರಾಗಿದ್ದರು. ಇವರು ಬೆಳ್ತಂಗಡಿ ತಾಲೂಕಿನಲ್ಲಿನ ಎಎನ್​ಎಂ ರಸ್ತೆ ಕಾಮಗಾರಿ 25 ಲಕ್ಷ ರೂ. ಮೊತ್ತ ಹಾಗೂ ಬೆಳ್ತಂಗಡಿ ತಾಲೂಕು ಕರಿಮಣೇಲು ಗ್ರಾಮದ ಕೈರೋಳಿ ಎಂಬಲ್ಲಿ 20 ಲಕ್ಷ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ಬಿಡ್​​ ಸಲ್ಲಿಸಿ ಆಯ್ಕೆಯಾಗಿ ಕಾಮಗಾರಿ ಪೂರ್ಣಗೊಳಿಸಿದ್ದರು. ಬಳಿಕ ಸೈಟ್‌ನ ಮೆಟೀರಿಯಲ್ ಪರಿಶೀಲನೆ ಮಾಡಿ ವರದಿ ನೀಡಲು ಮಂಗಳೂರು ಲೋಕೋಪಯೋಗಿ ಇಲಾಖೆಯ ಗುಣ ಮತ್ತು ಭರವಸೆ ವಿಭಾಗಕ್ಕೆ ಕಡತ ಬಂದಿತ್ತು. ಈ ಬಗ್ಗೆ ಅಲ್ಲಿನ ಕಿರಿಯ ಇಂಜಿನಿಯರ್-2 ಅವರಲ್ಲಿ ಮಾತನಾಡಿದಾಗ ಅವರು ಫೈಲ್ ಬಂದಿರುವುದಾಗಿ ತಿಳಿಸಿ ರಿಪೋರ್ಟ್​ ನೀಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರುದಾರರು ಆರೋಪಿಸಿ, ಲೋಕಾಯುಕ್ತರಿಗೆ ದೂರು ನೀಡಿದ್ದರು.

Last Updated : Oct 20, 2023, 7:48 PM IST

ABOUT THE AUTHOR

...view details