ಬೆಳಗಾವಿ :ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (KAT) ಪೀಠ ಸ್ಥಾಪನೆ ಸಂಬಂಧ ಕೆಎಟಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭಾನುವಾರ ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಸ್ಥಳ ಪರಿಶೀಲನೆ ನಡೆಸಿ, ಚರ್ಚಿಸಿದರು.
ಕೆಎಟಿ ಬೆಳಗಾವಿ ಪೀಠ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಮತ್ತು ಶಾಸಕಿ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಪೀಠ ಸ್ಥಾಪನೆ ಮಾಡಲು ಹಿಂಡಲಗಾ ಗ್ರಾಮದ ಸಿಂಧಿ ಕಾಲೋನಿಯ ಕಲ್ಯಾಣ ಮಂಟಪ ಹತ್ತಿರವಿರುವ ಒಂದು ಎಕರೆ ಪ್ರದೇಶವನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಭಾನುವಾರ ಆಯ್ಕೆ ಮಾಡಿರುವ ಸ್ಥಳಕ್ಕೆ ತೆರಳಿ ಸಾಧ್ಯಾಸಾಧ್ಯತೆ ಕುರಿತು ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅಧ್ಯಕ್ಷರಾದ ಆರ್ ಬಿ ಬೂದಿಹಾಳ ಹಾಗೂ ಸದಸ್ಯರಾದ ಟಿ.ನಾರಾಯಣಸ್ವಾಮಿ, ವಿಲೇಖನಾಧಿಕಾರಿ ಎಸ್.ಕೆ. ಒಂಟಿಗೋಡಿ, ಕೆ.ಎಸ್ ನಾಗರತ್ನ, ತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಹಾಗೂ ಬೆಳಗಾವಿ ವಕೀಲರ ಸಂಘದ ಅಧಕ್ಷ ಪ್ರಭು ಯತ್ನಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಪಾವಗಡ ಅಪಘಾತ : ಬಸ್ನ ಮೇಲಿದ್ದರು 40ಕ್ಕೂ ಹೆಚ್ಚು ಮಂದಿ!
ಆಯ್ಕೆ ಮಾಡಿರುವ ಸ್ಥಳವು ಶೇ. 30ರಷ್ಟು ಹಳ್ಳದಿಂದ ಕೂಡಿದ್ದು, ಶೇ.20ರಷ್ಟು ಸಿಡಿಪಿ ಯೋಜನೆಯ ಪ್ರಕಾರ ರಸ್ತೆಯನ್ನು ಒಳಗೊಂಡಿದೆ. ಹಾಗಾಗಿ, ಒಂದು ಎಕರೆಯ ಪೈಕಿ ಶೇ.50ರಷ್ಟು ಜಾಗ ಮಾತ್ರ ಸಿಗುವುದರಿಂದ ಸ್ಥಳದ ಅಭಾವವಾಗಲಿದೆ. ಇದೇ ಹಿಸ್ಸಾದಲ್ಲಿ ಇನ್ನೂ 20 ಗುಂಟೆ ಖಾಲಿ ಸ್ಥಳವಿದ್ದು, ಈ ಸ್ಥಳವನ್ನು ಕೆಎಟಿಗೆ ಒದಗಿಸಿಕೊಡಲು ಸರ್ಕಾರದ ಅನುಮೋದನೆ ಪಡೆಯುವಂತೆ ತಹಶೀಲ್ದಾರರಿಗೆ ಸೂಚಿಸಲಾಯಿತು.