ಬೆಳಗಾವಿ: ಇಲ್ಲಿನ ಶಾಹುನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗುತ್ತಿದ್ದ ಯುವಕರಿಬ್ಬರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಬಗ್ಗೆ ಶಾಹುನಗರ ನಿವಾಸಿ ಸಂಪತ್ ಕುಮಾರ ಮಾತನಾಡಿ, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಮೂರ್ತಿ ತಯಾರಕನಿಗೆ ಹಾಗೂ ಮೂರ್ತಿ ತಯಾರಿಸಲು ಮುಂಗಡ ಹಣ ಕೊಟ್ಟಿರುವ ನಮ್ಮ ಮೇಲೆ ಪೊಲೀಸರು ಹಲ್ಲೆ ಮಾಡುವ ಮೂಲಕ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಹುನಗರ ನಿವಾಸಿ ಸಂಪತ್ ಕುಮಾರ್ ಶಾಹುನಗರದಲ್ಲಿ ಕಳೆದ ನ.1ರಂದು ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿ ಸಲ್ಲಿಸಿ ಮೂರ್ನಾಲ್ಕು ತಿಂಗಳು ಕಳೆದರೂ ಯಾವೊಬ್ಬ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನ.1ರಂದು ಪ್ರತಿಷ್ಠಾಪನೆ ಮಾಡಬೇಕಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಪೊಲೀಸರೇ ಅಡ್ಡಿಯಾಗಿದ್ದಾರೆ ಎಂದು ದೂರಿದರು.
ಇದೇ ವಿಷಯವಾಗಿ ಕಾಕತಿ ಪೊಲೀಸರು ಪ್ರತಿದಿನ ನಮ್ಮ ಮನೆಗಳಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಇದರ ಜೊತೆಗೆ ಮೂರ್ತಿ ತಯಾರಿಸುತ್ತಿದ್ದ ಶಿಲ್ಪಿಗೆ ಬೆದರಿಕೆ ಹಾಕುತ್ತಿದ್ದಲ್ಲದೇ ನಮ್ಮನ್ನು ಹಾಗೂ ಸಂಗೊಳ್ಳಿ ರಾಯಣ್ಣನ ನಾಲ್ಕು ಪುತ್ಥಳಿಗಳನ್ನು ವಶಕ್ಕೆ ಪಡೆದು, ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ನಮ್ಮ ಮೇಲೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಯಾವುದಾದರೊಂದು ಕೇಸ್ ಹಾಕಿ ಜೈಲಿಗಟ್ಟುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿದ್ದಾರೆ.
ಇದಲ್ಲದೇ ಸಂಗೊಳ್ಳಿ ರಾಯಣ್ಣ ಮೂರ್ತಿ ನಿರ್ಮಾಣಕಾರರನ್ನು ಅರೆಸ್ಟ್ ಮಾಡಿರುವ ಕಾಕತಿ ಪೊಲೀಸರು ಠಾಣೆಯಲ್ಲಿ ನಮ್ಮ ಮುಂದೆಯೇ ಅವರನ್ನು ಬೂಟ್ ಹಾಗೂ ಲಾಠಿಗಳಿಂದ ಹೊಡೆದು ರಾಯಣ್ಣ ಪುತ್ಥಳಿ ತಯಾರಿಸದಂತೆ ಚಿತ್ರಹಿಂಸೆ ನೀಡುತ್ತಿದ್ದಾರೆ. ನಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗುವುದು ಎಂದು ಹೆದರಿಸುವ ತಂತ್ರ ಮಾಡುತ್ತಿದ್ದಾರೆ. ಹೀಗಾಗಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು. ಪೊಲೀಸರ ಕಿರುಕುಳ ತಪ್ಪಿಸಬೇಕು ಎಂದು ಶಾಹುನಗರದ ನಿವಾಸಿ ಸಂಪತ್ ಕುಮಾರ ದೇಸಾಯಿ ಒತ್ತಾಯಿಸಿದ್ದಾರೆ.