ಚಿಕ್ಕೋಡಿ (ಬೆಳಗಾವಿ): ಸುಮಾರು ಎರಡು ದಶಕಗಳಿಂದ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡದ ಹಿನ್ನೆಲೆ ಐನಾಪುರದ 8ನೇ ವಾರ್ಡಿನ ನಾಗರಿಕರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಮುಖ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ವಾರ್ಡ್ ನಂಬರ್ 8ರ ಭೋವಿ ಮತ್ತು ನಾವಿ ಗಲ್ಲಿಗಳಲ್ಲಿ ಸುಮಾರು 20 ವರ್ಷಗಳಿಂದ ರಸ್ತೆ ಹದೆಗೆಟ್ಟು ಹೋಗಿದೆ, ಅಲ್ಲದೆ ಇದ್ದ ಸಣ್ಣ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಬರುತ್ತಿದೆ.
ರಸ್ತೆ, ಚರಂಡಿ ನಿರ್ಮಿಸುವಂತೆ ಪಟ್ಟಣ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ ಒಂದು ಸಣ್ಣ ಮಳೆಯಾದರೆ ಸಾಕು ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಈಗಾಗಲೇ ಹಲವರು ಜಾರಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಚರಂಡಿಯಲ್ಲಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗದ ಭಯ ಸಹ ಆರಂಭವಾಗಿದೆ.
ಡೆಂಗ್ಯೂ, ಮಲೇರಿಯಾ, ಚಿಕುನ್ಗುನ್ಯಾ ಮುಂತಾದ ರೋಗಗಳು ಹರಡುವ ಸಾಧ್ಯತೆ ಇದ್ದು, ಈ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಯಾವುದೇ ಬೆಲೆ ನೀಡದ್ದರಿಂದ ಪ್ರತಿಭಟನೆ ಕೈಗೊಂಡಿದ್ದೇವೆ ಎಂದು ಜನತೆ ಹೇಳಿದರು. ಕೂಡಲೇ ರಸ್ತೆ, ಚರಂಡಿ ಸಮಸ್ಯೆ ಬಗೆಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.