ಬೆಳಗಾವಿ: ಬಸವತತ್ವ ಪ್ರಚಾರಕ ಮತ್ತು ತಮ್ಮ ಪ್ರವಚನಗಳ ಮೂಲಕ ರಾಜ್ಯದಲ್ಲಿ ಖ್ಯಾತಿ ಗಳಿಸಿರುವ ಚನ್ನಮ್ಮ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಜೀವ ಬೆದರಿಕೆ ಪತ್ರ ಕಳುಹಿಸಲಾಗಿದೆ. ಆಗಸ್ಟ್ 8 ರಂದು ಈ ಪತ್ರ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ವಾಮೀಜಿಗೆ 2020ರಿಂದ ಈವರೆಗೆ 5ಕ್ಕೂ ಹೆಚ್ಚು ಜೀವ ಬೆದರಿಕೆ ಪತ್ರಗಳು ಬಂದಿದೆ.
ಬೆದರಿಕೆ ಪತ್ರ:ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ಎಂದು ಆರಂಭಿಸಿ, ಸಾವು 2020ರಲ್ಲಿ ತಪ್ಪಿರಬಹುದು. 2023ರಲ್ಲಿ ತಪ್ಪುವುದಿಲ್ಲ. ನಮ್ಮ ಧರ್ಮ ದೇವತೆಗಳನ್ನು ನಿಂದಿಸುವ ನಿನಗೆ ಘೋರವಾದ ಹತ್ಯೆಯೇ ಬರುತ್ತೆ. ಅಂತಿಮ ದಿನಗಳು ಪ್ರಾರಂಭವಾಗಿವೆ. ಓಂ ಶ್ರೀ ಕಾಳಿಕಾದೇವಿ ನಮಃ ಓಂ ಶ್ರೀ ಕಾಳಿಕಾದೇವಿ ನಮಃ ಸಹಿಷ್ಣು ಹಿಂದೂ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಮಾಜಕ್ಕೆ ನನ್ನ ಸೇವೆ ನಿಂತು ಹೋಗಬಾರದು:ಬೆದರಿಕೆ ಪತ್ರದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಿಜಗುಣಾನಂದ ಸ್ವಾಮೀಜಿ, ಒಬ್ಬನೇ ವ್ಯಕ್ತಿ ನನಗೆ ಜೀವ ಬೆದರಿಕೆ ಪತ್ರ ಬರೆಯುತ್ತಿದ್ದಾನೆ. ಒಂದೇ ಹಸ್ತಾಕ್ಷರ ಇದೆ, ಹೆಸರು ಇಲ್ಲ, ದ್ವೇಷದ ಉದ್ದೇಶ ಇಲ್ಲ. ಸೈದ್ಧಾಂತಿಕ ಹೋರಾಟದ ಬಗ್ಗೆ ದ್ವೇಷ ಇಟ್ಟುಕೊಂಡು ಪತ್ರ ಬರೆಯುತ್ತಿದ್ದಾನೆ. 15 ದಿನಗಳ ಹಿಂದೆ ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಪತ್ರ ಬಂದಿದೆ. ಜೀವ ಬೆದರಿಕೆ ಪತ್ರ ಸಂಬಂಧ ಕಿತ್ತೂರು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.
ಚಿತ್ರದುರ್ಗ, ದಾವಣಗೆರೆ ಹೀಗೆ ಬೇರೆ ಬೇರೆ ಕಡೆಗಳಿಂದ ಪತ್ರಗಳು ಬರುತ್ತಿವೆ. ಸಾವಿನ ಬಗ್ಗೆ ನನಗೆ ಯಾವುದೇ ಭಯವಿಲ್ಲ. ಆದರೆ ಸಮಾಜಕ್ಕೆ ನಮ್ಮ ಸೇವೆ ನಿಂತು ಹೋಗುತ್ತೆ ಎಂಬ ಚಿಂತೆ ನನ್ನನ್ನು ಕಾಡುತ್ತಿದೆ. ಸರ್ಕಾರ ಆದಷ್ಟು ಬೇಗ ಇದರ ಹಿಂದಿದ್ದವರನ್ನು ಪತ್ತೆ ಹಚ್ಚಬೇಕು. ರಾಜ್ಯದಲ್ಲಿ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆಯಾಗಿದೆ. ಈಗ ಕೊಲೆ ಬೆದರಿಕೆ ಬರುತ್ತಿರುವುದರಿಂದ ನನ್ನಲ್ಲಿ ಆತಂಕ ಹುಟ್ಟಿಸಿದೆ. ಕ್ಷೇತ್ರದ ಶಾಸಕರು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಸರ್ಕಾರಕ್ಕೆ ನಾನು ಮನವಿ ಮಾಡುವುದಿಲ್ಲ, ಇದು ಸರ್ಕಾರದ ಕೆಲಸ. ನಾನು ಒಬ್ಬನೇ ಮಠದಲ್ಲಿ ಇರುತ್ತೇನೆ, ಹೀಗಾಗಿ ಆತಂಕ ಶುರುವಾಗಿದೆ ಎಂದು ತಿಳಿಸಿದ್ದಾರೆ.
ಬೆದರಿಕೆ ಹಾಕುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು- ಜಗದೀಶ್ ಶೆಟ್ಟರ್:ಈ ಬಗ್ಗೆ ಬೈಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್, ಬಸವಣ್ಣನವರ ಹಾದಿಯಲ್ಲಿ ನಿಜಗುಣಾನಂದ ಸ್ವಾಮೀಜಿ ಕೆಲಸ ಮಾಡುತ್ತಿದ್ದಾರೆ. ಬಸವ ತತ್ವ ಪ್ರಚಾರ ಮಾಡುತ್ತಾರೆ. ವಸ್ತುಸ್ಥಿತಿ ಹೇಳುತ್ತಾರೆ. ಹೀಗಾಗಿ ಬೆದರಿಕೆ ಬಂದಿದೆ. ಸ್ವಾಮೀಜಿ ಭಯಪಡುವ ಅವಶ್ಯಕತೆ ಇಲ್ಲ, ಏನೂ ಆಗುವುದಿಲ್ಲ. ಈ ರೀತಿ ಬೆದರಿಕೆ ಹಾಕುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಸ್ವಾಮೀಜಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು. ಈ ವಿಚಾರವನ್ನು ಸಿಎಂ ಮತ್ತು ಗೃಹ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದ ಏಳು ಸಾಹಿತಿಗಳಿಗೂ ಜೀವ ಬೆದರಿಕೆ ಪತ್ರ ಬರೆದಿರುವುದು ಒಬ್ಬನೇ ಚಾಲಾಕಿ: ಸಿಸಿಬಿ ತನಿಖೆಯಲ್ಲಿ ಬಯಲು