ಬೆಳಗಾವಿ: ರಾಜ್ಯದಲ್ಲಿ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತಂತೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮತ್ತು ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪೂರ್ ನಡುವೆ ಒಂದು ಬಹಿರಂಗ ಚರ್ಚೆಯಾಗಬೇಕು. ಈ ಬಹಿರಂಗ ಚರ್ಚೆಗೆ ಉಮೇಶ ಕತ್ತಿ ನೇತೃತ್ವ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಪ್ರಕಾಶ ಹುಕ್ಕೇರಿಗೆ ಬಹಿರಂಗ ಸವಾಲೆಸದಿದ್ದಾರೆ.
ಇಲ್ಲಿನ ಸದಾಶಿವ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ ಕಾರಜೋಳ, ಪ್ರಕಾಶ ಹುಕ್ಕೇರಿ ಹಾಗೂ ಅರುಣ ಶಹಾಪೂರ್ ನಡುವೆ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಣ ನೀತಿ ಕುರಿತಂತೆ ಒಂದು ಬೃಹತ್ ಚರ್ಚೆಯಾಗಬೇಕು. ಅದಕ್ಕೆ ಒಂದು ವೇದಿಕೆ ನಿರ್ಮಾಣ ಮಾಡಿ ಎಂದು ಸಚಿವ ಉಮೇಶ್ ಕತ್ತಿಗೆ ಹೇಳಿದರು. ನಮ್ಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಸಜ್ಜನ ರಾಜಕಾರಣಿ.
ಈ ಭಾಗದಲ್ಲಿ ಶಿಕ್ಷಣ, ನೀರಾವರಿ ಹಾಗೂ ಇತರ ಅಭಿವೃದ್ಧಿ ಕುರಿತಂತೆ ಕಾಳಜಿ ಹೊಂದಿದವರು. ಇಂತಹ ವ್ಯಕ್ತಿಗಳು ಈ ಕ್ಷೇತ್ರದಿಂದ ಆಯ್ಕೆಯಾದರೆ ನಮ್ಮ ಘನತೆ ಹೆಚ್ಚುತ್ತದೆ. ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಶಿಕ್ಷಕರು ಹಾಗೂ ಪದವೀಧರರ ಕುರಿತು ಅಪಾರ ಕಾಳಜಿ ಹೊಂದಿದ್ದರು. ಹಾಗಾಗಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಹುಕ್ಕೇರಿ ಎಲ್ಲಿ ಅಧಿಕಾರ ಸಿಗುತ್ತದೆಯೋ ಅಲ್ಲಿ ಚುನಾವಣೆಗೆ ನಿಲ್ಲುತ್ತಾರೆ: ಬಳಿಕ ಸಭೆಯನ್ನು ಉದ್ದೇಶಿಸಿ ಸಚಿವ ಉಮೇಶ ಕತ್ತಿ ಮಾತನಾಡಿ, ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿರವರು ಈ ಜಿಲ್ಲೆಯಲ್ಲಿ, ಸಂಸದರಾಗಿ, ವಿಧಾನಸಭೆ, ವಿಧಾನ ಪರಿಷತ್ ಎಲ್ಲಾ ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೀಗ ಪ್ರಕಾಶ ಹುಕ್ಕೇರಿ ಶಿಕ್ಷಣ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾರೆ.