ಬೆಳಗಾವಿ: "ಸುವರ್ಣಸೌಧ ವಿಧಾನಸಭೆ ಸಭಾಂಗಣದಿಂದ ಸಾವರ್ಕರ್ ಫೋಟೋ ತೆಗೆಯಿರಿ ನೋಡೋಣ" ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸವಾಲು ಹಾಕಿದ್ದಾರೆ. ಸುವರ್ಣಸೌಧದಲ್ಲಿ ಇಂದು ಮಾತನಾಡಿದ ಅವರು, "ಜನರ ದಾರಿ ತಪ್ಪಿಸಲು ಸಾವರ್ಕರ್ ಫೋಟೋ ತೆಗೆಯುವ ಮಾತನ್ನು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಫೋಟೋ ತೆಗೆದರೆ ಏನಾಗುತ್ತದೆ ಎನ್ನುವುದು ಅವರಿಗೆ ಗೊತ್ತಾಗುತ್ತದೆ. ಫೋಟೋ ತೆಗೆಯಲಿ. ನನ್ನ ಸವಾಲು ಸ್ವೀಕಾರ ಮಾಡಲಿ ನೋಡೋಣ" ಎಂದು ಹೇಳಿದರು.
"ಮೊದಲು ಸಮಸ್ಯೆಗಳನ್ನು ತೆಗೆಯಿರಿ, ಫೋಟೋ ಆಮೇಲೆ ತೆಗೆಯಿರಿ. ಇಡೀ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಇದನ್ನು ಸರ್ಕಾರ ಎದುರಿಸಬೇಕಾಗಿತ್ತು, ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿತ್ತು. ದನ-ಕರುಗಳಿಗೂ ನೀರು, ಮೇವು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಿದ್ರೂ ಕೂಡ, ಸರ್ಕಾರ ಕರ್ನಾಟಕದ್ದು ಆದರೆ ಅವರ ಸೇವೆ ಮಾತ್ರ ತೆಲಂಗಾಣಕ್ಕೆ ಅಂತ ಆಗಿದೆ. ಕಾಂಗ್ರೆಸ್ ಸರ್ಕಾರ ತೆಲಂಗಾಣಕ್ಕೆ ಹೋಗಿ ಅಲ್ಲಿ ಯಾವ ರೀತಿ ಸೇವೆ ಕೊಡಬೇಕು ಎನ್ನುವ ಬಗ್ಗೆ ಚಿಂತಿಸುತ್ತಿದೆ. ಕರ್ನಾಟಕದ ಬಗ್ಗೆ ಮಾಡ್ತಾ ಇಲ್ಲ ಎನ್ನುವ ಆಪಾದನೆ ರಾಜ್ಯದ ಜನರಿಂದ ಕೇಳಿ ಬರುತ್ತಿದೆ. ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕು. ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಸದನದ ಒಳಗಡೆ ಹಾಗೂ ಹೊರಗಡೆ ಹೋರಾಟಗಳು ನಡೆಯುತ್ತಿವೆ. ಹೀಗಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಸರ್ಕಾರ ವಿಷಯಾಂತರ ಮಾಡಲು, ಜನರ ದಾರಿ ತಪ್ಪಿಸಲು, ವೀರ ಸಾವರ್ಕರ್ ಫೋಟೋ ತೆಗೆಯುತ್ತೇವೆ ಎನ್ನುವ ಮಾತುಗಳನ್ನು ಹೇಳಲು ಪ್ರಾರಂಭಿಸಿದ್ದಾರೆ" ಎಂದು ಕಿಡಿಕಾರಿದರು.