ಬೆಳಗಾವಿ: ಇಡೀ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಹತ್ತು ದಿನಗಳ ಕಾಲ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಸ್ಥಳಾಂತರ ನಂತರ ಈಗ ಪುನರ್ವಸತಿ ಕಲ್ಪಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದ್ದು, ಈ ಕೆಲಸಕ್ಕೆ ಸಂಘ-ಸಂಸ್ಥೆಗಳ ನೆರವನ್ನು ಜಿಲ್ಲಾಡಳಿತ ಪಡೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.
ಪ್ರವಾಹ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ಕಾರೇತರ ಸಂಘ-ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 327 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 497 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಹತ್ತು ದಿನಗಳ ಕಾಲ ರಕ್ಷಣೆ, ಸ್ಥಳಾಂತರ, ಊಟೋಪಹಾರ ಒದಗಿಸಲಾಗಿದೆ. ಈ ಕೆಲಸದಲ್ಲಿ ಸಾರ್ವಜನಿಕರು, ದಾನಿಗಳು, ಸಂಘ-ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.