ಬೆಳಗಾವಿ: ಇದೇ 27ರಂದು ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಕೂಡ ನೀಡಲಿದ್ದಾರೆ. ಜೊತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಕರ್ನಾಟಕದಿಂದ ದೇಶದ ರೈತರಿಗೆ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬೆಳಗಾವಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ರೂಪುರೇಷೆ ಪೂರ್ವಸಿದ್ಧತೆ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಆರು ತಿಂಗಳ ಹಿಂದೆ ದೆಹಲಿಯ ಒಂದು ಹಳ್ಳಿಯಿಂದ ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ರೈತರ ಖಾತೆಗೆ 22 ಸಾವಿರ ಕೋಟಿ ರೂಪಾಯಿ ಸಂಧಾನ ಮಾಡಲಾಗಿತ್ತು. ಈ ಬಾರಿ 14 ಕೋಟಿ ರೈತರ ಖಾತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಎರಡು ಸಾವಿರದಂತೆ ಪ್ರತಿ ವರ್ಷ 6000 ರೂ.ರಂತೆ 2,70,000 ಕೋಟಿ ರೂಪಾಯಿ ದೇಶದ ರೈತರ ಖಾತೆಗೆ ಜಮಾ ಮಾಡಲಾಗುವುದು. ಪ್ರತಿ ವರ್ಷ ಆರು ತಿಂಗಳಿಗೊಮ್ಮೆ ಈ ಹಣವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬದ ದಿನದಂದು ಕರ್ನಾಟಕದಿಂದ ದೇಶದ ರೈತರ ಖಾತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ನಿಧಿಯಿಂದ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಮುಂಜಾನೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ ಬೆಳಗಾವಿಗೆ ಪ್ರಧಾನಿ ಆಗಮಿಸಲಿದ್ದಾರೆ. ಬೆಳಗಾವಿಯಲ್ಲಿ ಬೃಹತ್ತಾದ ರೋಡ್ ಶೋ ಮಾಡಲು ನಿರ್ಧರಸಿಲಾಗಿದೆ. ಆದರೆ ಪ್ರಧಾನಿ ಅವರ ಭದ್ರತೆಯ ಪಡೆ ಸೂಚಿಸಿದ ರೀತಿ ರೋಡ್ ಶೋ ಮಾಡಲಾಗುವುದು. ಯಾವ ಕಡೆ ರಸ್ತೆಯಿಂದ ರೋಡ್ ಶೋ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲವೆಂದು ಸಚಿವೆ ಶೋಭಾ ತಿಳಿಸಿದರು.