ಬೆಳಗಾವಿ : ಕುಂದಾನಗರಿಯ ಜಾಧವನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆ ಚಿರತೆ ಸೆರೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಚಿರತೆ ಪ್ರತ್ಯಕ್ಷವಾದ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಮತ್ತು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
ನಿನ್ನೆ ಜಿಲ್ಲೆಯ ಜಾಧವ್ ನಗರ ಮತ್ತು ವಿಶ್ವೇಶ್ವರಯ್ಯ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಅಲ್ಲದೇ ಕಟ್ಟಡ ಕಾರ್ಮಿಕ ಸಿದರಾಯಿ ಮಿರಜಕರ್ ಎಂಬುವವರ ಮೇಲೆ ಚಿರತೆ ದಾಳಿ ಮಾಡಿತ್ತು. ದಾಳಿಯಲ್ಲಿ ಸಿದರಾಯಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನೊಂದೆಡೆ ಮಗನ ಮೇಲೆ ಚಿರತೆ ದಾಳಿ ನಡೆಸಿದ ಸುದ್ದಿ ಕೇಳಿ, ತಾಯಿ ಶಾಂತಾ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಚಿರತೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಬೋನಿನಲ್ಲಿ ನಾಯಿ ಇಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಚಿರತೆ ಸೆರೆಗೆ ಗದಗ, ಭೀಮಗಡ ಅರಣ್ಯವಲಯದಿಂದ ತಜ್ಞ ಸಿಬ್ಬಂದಿಗಳನ್ನು ಕರೆತರಲಾಗಿದೆ.