ಬೆಳಗಾವಿ:ಮಹಾಮಾರಿ ಕೊರೊನಾ ಭೀತಿಯಿಂದ ಈಗಷ್ಟೇ ಹೊರ ಬಂದಿರುವ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿ ಗ್ರಾಮದ ಜನತೆಗೆ ಚಿರತೆಯೊಂದು ಭಯ ಹುಟ್ಟಿಸಿದ್ದು, ಯುವಕನೋರ್ವ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಶೈಲಗೌಡ ಪಾಟೀಲ ಮೇಲೆ ಚಿರತೆ ದಾಳಿ ಮಾಡಿದೆ. ಆಗ ಕೈಯಲ್ಲಿದ್ದ ಬಡಿಗೆಯಿಂದ ಚಿರತೆಗೆ ಹೊಡೆದಿರುವ ಯುವಕ ಬಳಿಕ ಚೀರಾಡಿ ಅಕ್ಕಪಕ್ಕದ ಜನರನ್ನು ಸೇರಿಸಿದ್ದಾನೆ. ಜನರನ್ನು ಕಂಡು ಚಿರತೆ ಓಡಿ ಹೋಗಿದೆ. ಇನ್ನು ಮಂಗಳವಾರ ರಾತ್ರಿಯಷ್ಟೆ ಇದೇ ಗ್ರಾಮದ ಕುರಿಯ ಮೇಲೆ ಚಿರತೆ ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು.