ಬೆಳಗಾವಿ/ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಎಕ್ಸ್ಪ್ರೆಸ್ ವೇ ಆಗಿರುವುದರಿಂದ ಅದು ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಬರುವವರ ಬಳಕೆಗೆ ಮಾತ್ರ ಮೀಸಲಾಗಿದೆ. ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರದಿಂದ ರಸ್ತೆಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಬೆಂಗಳೂರು ಮೈಸೂರು ದಶಪಥ ರಸ್ತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳಪೆ ಕಾಮಗಾರಿ ಆರೋಪ ಮಾಡಿದ್ದಾರೆ. ಆದರೆ ಎರಡು ಬಾರಿ ಆ ಭಾಗಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಮಳೆ ಹೆಚ್ಚಾದಾಗ ರಾಮನಗರ, ಮಂಡ್ಯದಲ್ಲಿ ಕುಮಾರಸ್ವಾಮಿ ಕರೆಗೆ ಸ್ಪಂದಿಸಿ ಕೇವಲ 1 ಗಂಟೆಯಲ್ಲೇ ನಮ್ಮ ಸಿಎಂ ಭೇಟಿ ನೀಡಿ ಬಂದಿದ್ದಾರೆ. ಆ ಸಮಯದಲ್ಲಿ ಆದ ಮಳೆಯ ಗಾತ್ರವನ್ನೂ ಸದಸ್ಯರು ಗಮನಿಸಬೇಕು, ರಾಮನಗರದಲ್ಲಿ ಅಂಡರ್ ಪಾಸ್ನಲ್ಲಿ ಪ್ಯಾಸೇಜ್ ಸಾಮರ್ಥ್ಯಕ್ಕೂ ಮೀರಿ ಎರಡು ಮೂರು ಪಟ್ಟು ಮಳೆ ಬಂದಾಗ ನೀರು ಬಂದಿತ್ತು.
ಅದನ್ನು ಸರಿಪಡಿಸಲು ಸೂಚನೆ ಕೊಡಲಾಗಿದೆ. ಉಬ್ಬು ತಗ್ಗು ಸರಿಪಡಿಸಲು ಸೂಚನೆ ಕೊಡಲಾಗುತ್ತದೆ. ನಾರಾಯಣಸ್ವಾಮಿ ಗುರುಕುಲದಲ್ಲಿ ಒತ್ತುವರಿಯಾಗಿತ್ತು. ಶೇಷಗಿರಿ ಹಳ್ಳಿ ಟೀಲ್ ಪ್ಲಾಜಾದಲ್ಲಿ ಡ್ರೈನೇಜ್ ಬಂದ್ ಆಗಿತ್ತು ಅದನ್ನು ತೆರವಿಗೆ ಸೂಚನೆ ಕೊಡಲಾಗಿದೆ. ಅಲ್ಲಿ ಆನೆ ಕಾರಿಡಾರ್ ಇದೆ, ಹಾಗಾಗಿ ಸೂಕ್ಷ್ಮವಾಗಿ ಕೆಲಸ ಮಾಡಲಾಗುತ್ತಿದೆ ಎಂದು ವಿವರ ನೀಡಿದರು. ಇದು ದೊಡ್ಡ ಯೋಜನೆಯಾಗಿರುವ ಕಾರಣ, ಅನುಕೂಲ, ಅನಾನುಕೂಲ ಎರಡೂ ಇರಲಿದೆ.