ಬೆಂಗಳೂರು/ಬೆಳಗಾವಿ: ಕಡಿಮೆ ಗುಣಮಟ್ಟದ ಬಿತ್ತನೆ ಬೀಜಗಳ ಪೂರೈಕೆಯಿಂದ ರೈತರಿಗೆ ಬೆಳೆ ನಷ್ಟವಾದಲ್ಲಿ ರೈತರು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ, ಬೀಜಗಳ ಗುಣಮಟ್ಟದಿಂದ ಬೆಳೆ - ನಷ್ಟವಾಗಿರುವುದು ದೃಢಪಟ್ಟಲ್ಲಿ ನಿಯಮಾನುಸಾರ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಪುಸಕ್ತ ಸಾಲಿನಲ್ಲಿ ರೈತರಿಗೆ ನೀಡುವ ಬಿತ್ತನೆ ಬೀಜಗಳ ಗುಣಮಟ್ಟ, ಕಡಿಮೆ ಮತ್ತು ಬೆಳೆ ನಷ್ಟವಾದ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ಕೃಷಿ ಇಲಾಖೆಯಿಂದ ನೀಡುತ್ತಿರುವ ವಿವಿಧ ಬಗೆಯ ಬಿತ್ತನೆ ಬೀಜಗಳನ್ನು ಇಲಾಖಾ ರೈತ ಸಂಪರ್ಕ ಕೇಂದ್ರಗಳು ದಾಸ್ತಾನೀಕರಿಸುವ ಮುನ್ನ ಸಂಬಂಧಪಟ್ಟ ಸಂಸ್ಥೆಗಳು ಬೀಜಗಳ ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಂಡು, ದೃಢೀಕೃತ ಬೀಜಗಳನ್ನು ಮಾತ್ರ ದಾಸ್ತಾನೀಕರಿಸಲಾಗುತ್ತದೆ.
ಅಲ್ಲದೆ, ಹಂಗಾಮು ಪೂರ್ವದಲ್ಲಿ ಬೀಜ ವಿತರಣೆಗೂ ಮುನ್ನ ಇಲಾಖೆಯಲ್ಲಿ ದಾಸ್ತಾನೀಕರಿಸಿದ ಬಿತ್ತನೆ ಬೀಜಗಳಲ್ಲಿ ಬೀಜ ಪರಿವೀಕ್ಷಕರು ಬೀಜ ಮಾದರಿಗಳನ್ನು ತೆಗೆದು ವಿಶ್ಲೇಷಣೆಗೊಳಪಡಿಸಿ, ಬೀಜಗಳ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರ, ರೈತರಿಗೆ ವಿತರಿಸಲಾಗುತ್ತಿದೆ. ಒಂದು ವೇಳೆ, ಬೀಜಗಳು ಕಡಿಮೆ ಗುಣಮಟ್ಟದೆಂದು ಕಂಡುಬಂದಲ್ಲಿ ಅಂತಹ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಿಲ್ಲ ಹಾಗೂ ಅಂತಹ ಸಂಸ್ಥೆಗಳ ವಿರುದ್ಧ ಬೀಜ ಕಾಯ್ದೆಗಳನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪುಸಕ್ತ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಜಿಲೆನ್ಸ್ ತಂಡಗಳು ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡು ಅನಧಿಕೃತವಾಗಿ ದಾಸ್ತಾನು ಮಾಡಿದ 19 ಪ್ರಕರಣಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗಿದೆ. 13 ಪ್ರಕರಣಗಳಲ್ಲಿ ಪರವಾನಗಿಗಳನ್ನು ಅಮಾನತು ಮಾಡಲಾಗಿದೆ. 2 ಪ್ರಕರಣಗಳಲ್ಲಿ ಪರವಾನಗಿಗಳನ್ನು ರದ್ದು ಮಾಡಲಾಗಿದೆ. ಬಾಕಿ ಉಳಿದ 4 ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟಾರೆ 434 ಕ್ವಿಂಟಲ್ 62.67 ಲಕ್ಷ ಮೌಲ್ಯದ ಬಿತ್ತನೆ ಬೀಜಗಳನ್ನು ಜಪ್ತಿ ಮಾಡಲಾಗಿದೆ ಎಂದು ಸದಸ್ಯರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.