ಕರ್ನಾಟಕ

karnataka

ETV Bharat / state

ವಿಧಾನಪರಿಷತ್, ವಿಧಾನಸಭೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆ - ಶಾಸಕ ಬಸವರಾಜ ಎಸ್ ಹೊರಟ್ಟಿ ಸಭಾಪತಿಯಾಗಿ ಆಯ್ಕೆ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದೆ.

Legislative Council Chairman Basavaraj Horatti
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ

By

Published : Dec 29, 2022, 9:45 PM IST

ಬೆಂಗಳೂರು(ಬೆಳಗಾವಿ): ಕುಂದಾನಗರಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದಿದೆ. ಡಿಸೆಂಬರ್ 19 ರಿಂದ ಡಿ.29 ರವರೆಗೆ ನಡೆದ ವಿಧಾನ ಪರಿಷತ್ತಿನ ಕಾರ್ಯಕಲಾಪವನ್ನು ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಅಧಿವೇಶನವನ್ನು ಡಿ.30 ವರೆಗೆ ಕರೆಯಲಾಗಿತ್ತು. ಆದರೆ ಒಂದು ದಿನ ಮೊದಲೇ ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ.

ವಿಧಾನ ಪರಿಷತ್ತಿನಲ್ಲಿ 9 ದಿನ:ವಿಧಾನ ಪರಿಷತ್ತಿನಲ್ಲಿ 9 ದಿನ 45 ಗಂಟೆಗಳ ಕಾಲ ಚರ್ಚೆ ನಡೆಯಿತು. ವಿಧಾನ ಸಭೆಯಿಂದ ಅಂಗೀಕೃತವಾದ 6, ತಿದ್ದುಪಡಿಯೊಂದಿಗೆ ಅಂಗೀಕೃತವಾದ 01 ಹಾಗೂ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ 02 ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕರಿಸಲಾಗಿದೆ.

ಮಹಾರಾಷ್ಟ್ರದ ಧೋರಣೆಗೆ ಖಂಡನೆ:ಪರಿಷತ್ ಕಲಾಪದಲ್ಲಿ ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಧೋರಣೆ ಖಂಡಿಸಿ ಒಕ್ಕೊರಲಿನಿಂದ ಖಂಡನಾ ನಿರ್ಣಯ ಕೈಗೊಳ್ಳಲಾಯಿತು. ರಾಜ್ಯ ಗಡಿ ವಿಚಾರವಾಗಿ ಸರ್ವ ಪಕ್ಷಗಳು ಒಂದಾಗಿದ್ದು ರಾಷ್ಟ್ರ ಮಟ್ಟದಲ್ಲಿ ಸೋಜಿಗವಾಗಿ ಕಂಡುಬಂತು. ರಾಷ್ಟ್ರ ಮಟ್ಟದ ಮುಖ್ಯ ಸುದ್ದಿವಾಹಿನಿಗಳು ಈ ಸಂಗತಿಯನ್ನು ಬಿತ್ತರಿಸಿದವು ಎಂದು ಸಭಾಪತಿ ಹೊರಟ್ಟಿ ತಿಳಿಸಿದರು.

ಡಿ.19 ರಂದು ಪರಿಷತ್ತಿನಲ್ಲಿ ನಿಧನರಾದ ಗಣ್ಯರುಗಳಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಡಿ.20 ರಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಕಳೆದ ಅಧಿವೇಶನದ ವರದಿ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಮಂಡಿಸಿದರು. ಡಿ.21ರಂದು ಶಾಸಕ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಭಾಪತಿ ಚುನಾವಣೆ ಕಾರ್ಯಕಲಾಪ ಮುಗಿಯುವ ಹೊರಗೆ ಹಂಗಾಮಿ ಸಭಾಪತಿ ರಘುನಾಥ್ ‌ರಾವ್ ಮಲ್ಕಾಪೂರೆ‌ ಸದನದ ಕಾರ್ಯಕಲಾಪ ನಿರ್ವಹಿಸಿದರು. ಡಿ.23 ರಂದು ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಶಾಸಕ ಪ್ರಾಣೇಶ್‌ ಎಂ.ಕೆ.ಉಪ ಸಭಾಪತಿಯಾಗಿ ಚುನಾಯಿತರಾದರು.

1419 ಪ್ರಶ್ನೆ ಸ್ವೀಕಾರ: ಪರಿಷತ್ತಿನಲ್ಲಿ ಒಟ್ಟು 1,419 ಪ್ರಶ್ನೆಗಳನ್ನು ಶಾಸಕರಿಂದ ಸ್ವೀಕರಿಸಲಾಯಿತು. ಇದರಲ್ಲಿ 150 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಿ, ಅವುಗಳ ಪೈಕಿ 115 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು. ಲಿಖಿತ ಮೂಲಕ ಉತ್ತರಿಸುವ ಒಟ್ಟು 1,269 ಪ್ರಶ್ನೆಗಳ ಪೈಕಿ 963 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು. ಡಿ.30 ಕಾರ್ಯಕಲಾಪ ಮೊಟಕು ಗೊಳಿಸಿದ್ದರಿಂದ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಗಳ ನಿಯಮ 37 (ಎ)ರ ರೀತ್ಯಾ ಡಿ.30 ಉತ್ತರಿಸಬೇಕಾಗಿದ್ದ 15 ಪ್ರಶ್ನೆಗಳ ಪೈಕಿ 08 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 102 ಪ್ರಶ್ನೆಗಳ ಪೈಕಿ 29 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು.

ವರದಿ ಮಂಡನೆ: ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2021-22ನೇ ಸಾಲಿನ 6ನೇ ವರದಿ, ಅಧೀನ ಶಾಸನ ರಚನಾ ಸಮಿತಿಯ 2021-22ನೇ ಸಾಲಿನ 52ನೇ ವರದಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 2021-22ನೇ ಸಾಲಿನ 4ನೇ ವರದಿ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 2021- 22ನೇ ಸಾಲಿನ 37ನೇ ವರದಿ ಮಂಡಿಸಲಾಯಿತು.

ಸಾರ್ವಜನಿಕ ಲೆಕ್ಕಪತ್ರಗಳ 2021-22ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕವಚ-108ಕ್ಕೆ ಸಂಬಂಧಿಸಿದ 8ನೇ ವರದಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಮಾಧ್ಯಮಿಕ ಶಿಕ್ಷಣ ಅಭಿಯಾನ 9ನೇ ವರದಿ ಮತ್ತು ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಯು 02 ಅರ್ಜಿಗಳನ್ನು ಹಾಗೂ 29ನೇ ವರದಿಯನ್ನು ಮತ್ತು ಖಾಸಗಿ ವಿಧೇಯಕಗಳು ಹಾಗೂ ನಿರ್ಣಯಗಳ ಸಮಿತಿಯ ಮೊದಲನೇ ವರದಿಯನ್ನು ಪರಿಷತ್ತಿನಲ್ಲಿ ಮಂಡಿಸಲಾಯಿತು ಎಂದರು.
ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಮುಖ್ಯಮಂತ್ರಿಗಳ ನಗರೋತ್ತಾನ ಯೋಜನೆ (ಫೇಸ್‌-3) (2022ನೇ ವರ್ಷದ ವರದಿ ಸಂಖ್ಯೆ-6), 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು (ಸಂಪುಟ I ಮತ್ತು II), 2022-23ನೇ ಸಾಲಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಹಾಗೂ 2022-23ನೇ ಸಾಲಿನ ಪೂರಕ ಅಂದಾಜುಗಳ (ಎರಡನೇ ಕಂತು) ವರದಿಯನ್ನು ಮಂಡಿಸಲಾಯಿತು ಎಂದು ತಿಳಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಸಹಕರಿಸಿದ್ದಕ್ಕೆ ಸಂಬಂಧಪಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.

ವಿಧಾನಸಭೆ ಕಲಾಪ ಮುಂದೂಡಿಕೆ:ಕಾಂಗ್ರೆಸ್ ಸದಸ್ಯರ ಸಭಾತ್ಯಾಗದೊಂದಿಗೆ ಸ್ಪೀಕರ್ ಕಾಗೇರಿ ಬೆಳಗಾವಿ ವಿಧಾನಸಭೆ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು. ಉತ್ತರ ಕರ್ನಾಟಕ ವಿಚಾರವಾಗಿ ಸರ್ಕಾರ ಸಮರ್ಥ ಉತ್ತರ ಕೊಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರಿಂದ ಸಭಾತ್ಯಾಗ:ಉತ್ತರ ಕರ್ನಾಟಕ ಸಮಸ್ಯೆ ಪರಿಗಣಿಸಿಲ್ಲ. ಚರ್ಚಿಸಿದ್ದಕ್ಕೆ ಉತ್ತರ ಕೊಡಲ್ಲ. ರೈತ ಸಮಸ್ಯೆಗೆ ಉತ್ತರ ಕೊಡಲ್ಲ. ಇಂದು ಎಲ್ಲಾ ಬೆಳೆಗಳ ಬಗ್ಗೆ ಮಾತನಾಡಿದ್ದೆವು. ಆದ್ರೆ ಯಾವುದನ್ನೂ ಪರಿಗಣಿಸದೆ ಒಬ್ಬರೇ ಮಂತ್ರಿ ಕುಳಿತು ಉತ್ತರ ಕೊಟ್ಟಿದ್ದಾರೆ. ನಾವು ಹೇಳಿದ್ದಕ್ಕೆ ಉತ್ತರ ಕೊಟ್ಟಿಲ್ಲ, ಸಮರ್ಥವಾಗಿಯೂ ಇಲ್ಲ, ಪರಿಹಾರ ಕೊಡೋದಾಗಿಯೂ ಹೇಳಲಿಲ್ಲ. ಈ ರೀತಿಯ ಸರ್ಕಾರಕ್ಕೆ ನನ್ನ ವಿರೋಧ ಇದೆ. ನಾನು ಉತ್ತರ ಕರ್ನಾಟಕದಿಂದ ಆರಿಸಿ ಬಂದವನು. ಈ ರೈತ ವಿರೋಧಿ ನೀತಿ ಖಂಡಿಸಿ ವಾಕ್ ಔಟ್ ಮಾಡ್ತೀನಿ ಎಂದು ಸಭಾತ್ಯಾಗ ಮಾಡಿದರು.

9 ದಿನದ ವಿಧಾನಸಭೆ ಕಲಾಪ ಮುಕ್ತಾಯ: ಕೊನೆ ಕ್ಷಣಕ್ಕೆ ಸದನಕ್ಕೆ ಹಾಜರಾದ ಡಿ.ಕೆ.ಶಿವಕುಮಾರ್, ಭ್ರಷ್ಟಾಚಾರ ವಿಚಾರಕ್ಕೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸರ್ಕಾರದ ವಿರುದ್ದ ಕೈ ಸದಸ್ಯರು ಆಕ್ರೋಶ ಹೊರಹಾಕಿದರು. ಜೆಡಿಎಸ್ ಸದಸ್ಯರೂ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲದ ಮಧ್ಯೆ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಆ ಮೂಲಕ ಒಂಬತ್ತು ದಿನಗಳ ವಿಧಾನಸಭೆ ಕಲಾಪ ಮುಕ್ತಾಯವಾಯಿತು.

ಇದನ್ನೂಓದಿ:ಲಿಂಗಾಯತ, ಒಕ್ಕಲಿಗರಿಗೆ ಸಿಹಿಸುದ್ದಿ: ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

ABOUT THE AUTHOR

...view details