ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ಬೆಳಗಾವಿ:ಬೆಳಗಾವಿ ಈ ಅಧಿವೇಶನ ಪೂರ್ತಿ ಜನರ ಮೇಲೆ ಬರೆ ಎಳೆಯುವ ಅಧಿವೇಶನವಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇಂದು ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಸಾಮಾನ್ಯವಾಗಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ಈ ಭಾಗಕ್ಕೆ ಪರಿಹಾರ ಹುಡುಕುವ ಕೆಲಸ ಆಗಬೇಕು. ಅಧಿವೇಶನ ನಡೆಯುವ ವೇಳೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸರ್ಕಾರ ಉತ್ತರ ಕರ್ನಾಟಕಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ತೆರಿಗೆ ಹಾಕುವ ಅಧಿವೇಶನ ಇದು. ಮಗು ದತ್ತು ತೆಗೊಂಡರೆ ಅದಕ್ಕೂ ತೆರಿಗೆ ವಿಧಿಸಲಾಗುತ್ತಿದೆ. ಕಂದಾಯ ಇಲಾಖೆ ಸುಮಾರು 20-30 ಐಟಂಗಳ ಮೇಲೆ ತೆರಿಗೆ ಹಾಕಿದ್ದಾರೆ. ಆ ಮೂಲಕ ಸುಮಾರು 2,000 ಕೋಟಿ ರೂ. ಸಂಗ್ರಹ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನೂ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಸಭೆ ಮಾಡಿರೋದಾಗಿ ಮಾತ್ರ ಹೇಳಿದ್ದಾರೆ. ರಾಜ್ಯದ ಜನರಿಗೆ ಯಾವುದೇ ಉಪಯೋಗ ಆಗಿಲ್ಲ. ರೈತರ ಸಾಲಮನ್ನಾ ಬಗ್ಗೆ ಉತ್ತರ ಇಲ್ಲ. ಕಂದಾಯ ಸಚಿವರ ಉತ್ತರದಲ್ಲಿ ಹೇಳಿದ್ದೇ ಹೇಳಿದ್ದಾರೆ. 25,000 ರೂ. ಪರಿಹಾರ ಘೋಷಣೆ ಮಾಡಿಲ್ಲ. ಸಾಲಮನ್ನಾ ಮಾಡಿಲ್ಲ. ರೈತರ ಪಾಲಿಗೆ ಸರ್ಕಾರ ಕಟುಕರ ಸರ್ಕಾರ ಆಗಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಪಾಪರ್ ಆಗಿರುವ ಸರ್ಕಾರ ಇದಾಗಿದೆ ಎಂದು ಟೀಕಿಸಿದ್ದಾರೆ.
ಮುಂದುವರೆದು, ಉತ್ತರ ಕರ್ನಾಟಕ್ಕೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅನ್ಯಾಯವಾಗಿದೆ. ನಯಾ ಪೈಸೆ ಕೂಡ ಅಲ್ಲಿಯ ನೀರಾವರಿ ಯೋಜನೆಗೆ ಬಿಡುಗಡೆ ಮಾಡದೆ ಇರುವುದರ ಬಗ್ಗೆ ಚರ್ಚೆ ಆಗಬೇಕು ಎಂದು ಬಸನಗೌಡ ಯತ್ನಾಳ್ ಅವರೂ ಕೂಡ ಈ ಕುರಿತು ಮಾತನಾಡಿದ್ದು ಅಭಿಪ್ರಾಯ ಸಂಗ್ರಹಿಸಿದ್ದೇವೆ. 3 ರಾಜ್ಯಗಳ ಚುನಾವಣೆ ಸೋತ ಮೇಲೆ ಕಾಂಗ್ರೆಸ್ನಲ್ಲಿ ಶಾಸಕರ ಅಭದ್ರತೆ ಇದೆ. ಅಭಿವೃದ್ಧಿ ಕಾರ್ಯಕ್ಕೆ ಕಳೆದ 6 ತಿಂಗಳಲ್ಲಿ ನಯಾಪೈಸೆ ಕೊಟ್ಟಿಲ್ಲ. ಈ ವಿಚಾರದಲ್ಲಿ ಕುಂಠಿತವಾಗಿದೆ. ಹಿಂದೆ ನಮ್ಮ ಸರ್ಕಾರದಲ್ಲಿ ಕೊಟ್ಟಿರುವ ಹಣ ಕೂಡ ಈ ಸರ್ಕಾರ ನೀಡಿಲ್ಲ. ಬರದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಬೇಕಾಗಿತ್ತು. ಪ್ರತಿ ರೈತನಿಗೆ ಎಕರೆಗೆ 25 ಸಾವಿರ ಹಣ ಕೊಡಬೇಕಾಗಿತ್ತು. ಆದರೆ ಇನ್ನೂ ಕೊಟ್ಟಿಲ್ಲ. 2000 ಕೊಡುತ್ತೇವೆ ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದರು.
ಇದನ್ನೂ ಓದಿ:ಬರ ಪರಿಹಾರ ಕಡಿಮೆ ಮಾಡಿದ್ದಕ್ಕೆ ಕಿಡಿ; ಸರ್ಕಾರಕ್ಕೆ ತಲಾ 1 ಸಾವಿರ ರೂ. ಕೊಡಲು ಮುಂದಾದ ಹಾವೇರಿ ರೈತರು