ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಡಾ.ಹಿತಾ ಅವರ ಅದ್ಧೂರಿ ವಿವಾಹ ನಾಳೆ ಗೋವಾದ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ನಡೆಯಲಿದೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಸಹೋದರ ಶಿವಕುಮಾರ್ ಪುತ್ರಿ ಡಾ.ಹಿತಾ ಜೊತೆಗೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ನಾಳೆ ಸಪ್ತಪದಿ ತುಳಿಯಲಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಕುಟುಂಬಸ್ಥರು ಗೋವಾಗೆ ಬಂದಿಳಿದಿದ್ದು, ಈಗಾಗಲೇ ಮದುವೆ ಪೂರ್ವ ಕಾರ್ಯಕ್ರಮಗಳು ವೈಭವದಿಂದ ನೆರವೇರುತ್ತಿವೆ. ನಿನ್ನೆ ರಾತ್ರಿ ಮೆಹಂದಿ ಕಾರ್ಯಕ್ರಮ ನೆರವೇರಿದ್ದು, ಇಂದು ಹಳದಿ ಕಾರ್ಯಕ್ರಮ ನಡೆಯಲಿದೆ.
ನಾಳೆ ವಿವಾಹ ಸಮಾರಂಭದಲ್ಲಿ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಸೋನಿಯಾ ಗಾಂಧಿ ಗೋವಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಗೋವಾದಲ್ಲೇ ಇರುವ ಅವರು ವಿವಾಹಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ.
ಕೋವಿಡ್ ಹಿನ್ನೆಲೆಯಲ್ಲಿ ಆಪ್ತರು, ಗಣ್ಯರಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ.