ಬೆಳಗಾವಿ:ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಖಂಡಿತವಾಗಿಯೂ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ಇದೆಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ನಗರದ ಅಂಬೇಡ್ಕರ್ ಉದ್ಯಾನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ಹಿನ್ನೆಲೆ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜಾಸ್ತಿ ಏನೂ ಹೇಳಲು ಆಗುವುದಿಲ್ಲ. ಅದು ಪ್ರಕ್ರಿಯೆಯಲ್ಲಿದ್ದು, ಹೈಕಮಾಂಡ್ಗೆ ಹೆಚ್ಚಿನ ಮಾಹಿತಿಯಿದೆ ಎಂದರು.
ಬಿಜೆಪಿ ತೊರೆದು ಕೆಲ ನಾಯಕರು ಕಾಂಗ್ರೆಸ್ ಸೇರುವುದು ಈಗಾಗಲೇ ಶುರುವಾಗಿ ಬಿಟ್ಟಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇದಕ್ಕೂ ಮೊದಲು ರಾಜ್ಯ ಮತ್ತು ದೇಶದ ಜನತೆಗೆ ಸಮಾನತೆಯ ಹರಿಕಾರ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಶುಭಾಶಯ ಕೋರಿದ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರಿಗೆ ಯಾವುದೇ ಜಾತಿ ಇಲ್ಲ. ಸಮಾನವಾದ ಹಕ್ಕನ್ನು ನಮಗೆ ಎಲ್ಲ ರಂಗಗಳಲ್ಲೂ ನೀಡಿರುವ ಮಹಾನುಭಾವರಿಗೆ ನಮನ ಸಲ್ಲಿಸಲು, ಮರ್ಯಾದೆ ನೀಡಲು ತುಂಬು ಹೃದಯದಿಂದ ಇಲ್ಲಿಗೆ ಬಂದಿದ್ದೇನೆ ಎಂದರು.
ಇದನ್ನೂ ಓದಿ:ಲಕ್ಷ್ಮಣ ಸವದಿ ಇಂದು ಸಂಜೆ ಬಿಜೆಪಿಗೆ ಗುಡ್ಬೈ.. ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಜೊತೆ ಬೆಂಗಳೂರಿನತ್ತ ಪ್ರಯಾಣ
ಮತ್ತೊಂದೆಡೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಲಕ್ಷ್ಮಣ ಸವದಿ ಬಿಜೆಪಿಗೆ ಮತ್ತು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಲಕ್ಷ್ಮಣ ಸವದಿ ರಾಜೀನಾಮೆ ಪತ್ರದೊಂದಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಬೆಳಗ್ಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸವದಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಾಥ್ ನೀಡಿರುವುದು ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ವಿಮಾನ ನಿಲ್ದಾಣದಲ್ಲಿ ಮಾತನಾಡಿರುವ ಸವದಿ, ಬೆಂಗಳೂರಿಗೆ ಹೋಗಿ ಮೊದಲು ಸಾಧಕ, ಬಾಧಕ ಚರ್ಚೆ ಮಾಡಿ ನಂತರ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ. ವಿಧಾನ ಪರಿಷತ್ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ಕೊಡಬೇಕು. ಇನ್ನೂ ಹಂಗಿನಲ್ಲಿ ಇದ್ದೇನೆ, ಅದರಿಂದ ಹೊರಬರಬೇಕು. ಬಳಿಕ ಏನು ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಕಾಂಗ್ರೆಸ್, ಜೆಡಿಎಸ್ನಿಂದ ತಮಗೆ ಆಹ್ವಾನ ಇದೆ. ಈ ಕುರಿತು ಸಂಜೆಯಷ್ಟರಲ್ಲೇ ಒಂದು ತೀರ್ಮಾನಕ್ಕೆ ಬರ್ತಿನಿ. ಇನ್ನು ಏಪ್ರಿಲ್ 17 ಅಥವಾ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಅಲ್ಲದೇ ಕ್ಷೇತ್ರದ ಜನರ ಒಪ್ಪಿಗೆ ಪಡೆದಿದ್ದೇನೆ. ಖಾಸಗಿಯಾಗಿಯೂ ಅನೇಕರು ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ ಎಂದಿದ್ದಾರೆ. ಹೈಕಮಾಂಡ್ ಸಂಪರ್ಕದ ಬಗ್ಗೆ ಪ್ರತಿಕ್ರಿಯೆ ನೀಡಿ, ಮನೆ ಬಿಟ್ಟು ಹೊರಗೆ ಬಂದ ಮೇಲೆ ಸಂಪರ್ಕ ಮಾಡಿದರೇನು, ಬಿಟ್ಟರೇನು ಎಂದಿದ್ದಾರೆ.
ಇದನ್ನೂ ಓದಿ:ಸಿದ್ಧರಾಮಯ್ಯ ಸಲಹೆಯಿಂದ ನಾನು ವಿಧಾನಪರಿಷತ್ ಸ್ಥಾನಕ್ಕೆ ಆಯ್ಕೆಯಾದೆ: ಲಕ್ಷ್ಮಣ್ ಸವದಿ