ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಚಿಕ್ಕೋಡಿ: ಪಕ್ಷದಲ್ಲಿ ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿತ್ತು, ಅವಮಾನ ಮಾಡುತಿದ್ದರು, ಇವೆಲ್ಲ ಸಹಿಸಿಕೊಂಡು ನಾನು ಹಲವು ದಿನದಿಂದ ಬಿಜೆಪಿ ಪಕ್ಷದಲ್ಲಿ ಇದ್ದೆ. ಆದರೆ, ನಾನು ನಂಬಿದ ತಾಯಿ ಬಿಜೆಪಿ ಬೇರೆಯವರಿಗೆ ಆದ್ಯತೆ ನೀಡಿದ್ದರಿಂದ ನಾನು ಪಕ್ಷದಿಂದ ಹೊರಗೆ ಬರುತ್ತಿದ್ದೇನೆ ಎಂದು ಲಕ್ಷ್ಮಣ್ ಸವದಿ, ಬಿಜೆಪಿಗೆ ರಾಜೀನಾಮೆ ನೀಡುವ ಬಗ್ಗೆ ಸ್ಪಷ್ಟನೆ ನೀಡಿದರು.
ಇಂದು ಅಥಣಿ ಪಟ್ಟಣದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ನನ್ನ ರಾಜಕೀಯ ಗುರುಗಳಾದ ಬಿ ಎಲ್ ಸಂತೋಷ್ ಅವರ ಕರೆಯನ್ನು ನಾನು ಸ್ವೀಕರಿಸುತ್ತಿಲ್ಲ. ಏಕೆಂದರೆ ಅವರ ಶಿಷ್ಯನಾದ ನಾನು ಕರೆಯನ್ನ ಸ್ವೀಕರಿಸಿ ಏನಾದರೂ ತಪ್ಪು ಉತ್ತರ ಕೊಟ್ಟರೆ ಅವರ ಮನಸ್ಸಿಗೆ ನೋವಾಗುತ್ತದೆ ಎಂದು ಇಲ್ಲಿಯವರೆಗೆ ಅವರ ಕರೆಗಳನ್ನು ನಾನು ಸ್ವೀಕರಿಸುತ್ತಿಲ್ಲ. ನನಗೆ ಅವರ ಮೇಲೆ ಇರುವ ಗೌರವ ಅಂತಹದ್ದು ಎಂದು ಹೇಳಿದರು.
ಅಣ್ಣಾಸಾಬ್ ಜೊಲ್ಲೆ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ನಾನು ಮೊದಲಿನಿಂದಲೂ ಆತ್ಮೀಯ ಸ್ನೇಹಿತರು. ಹಾಗಾಗಿ ಸ್ನೇಹ ಪರವಾಗಿ ಮಾತನಾಡಲು ಬಂದಿದ್ದಾರೆ ಹೊರತು ಯಾವುದೇ ರೀತಿಯಾದ ಪಕ್ಷದ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳಲು ಬಂದಿಲ್ಲ. ನಾನು ಕೂಡ ದೆಹಲಿ ಮಟ್ಟದಲ್ಲಿ ನಿಮ್ಮ ಬಗ್ಗೆ ಟಿಕೆಟ್ ವಿಚಾರವಾಗಿ ವರಿಷ್ಠರ ಜೊತೆ ಮಾತನಾಡಿದ್ದೆ. ಆದರೂ ನಿಮಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಅವರೂ ಅಸಮಾಧಾನ ವ್ಯಕ್ತಪಡಿಸಿದರು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ನನ್ನ ಹಳೆ ಸ್ನೇಹಿತ, ಅವರು ನಾವು ಎಲ್ಲರೂ ಒಟ್ಟಾಗಿ ಸಚಿವ ಸ್ಥಾನವನ್ನು ಅಲಂಕರಿಸಿದ್ದೆವು. ಆದರೆ ಇವತ್ತು ನನಗೆ ರಾಜಕೀಯ ಅನಿವಾರ್ಯವಾಗಿದೆ, ನನಗೆ ಪಕ್ಷದಲ್ಲಿ ಹಿಂಸೆ ಆಗಿದೆ, ಅಲ್ಲದೇ ಕೆಲವು ವಿಚಾರದಲ್ಲಿ ನನಗೆ ತೀವ್ರ ನೋವು ಕೂಡ ಆಗಿದೆ. ಹಾಗಾಗಿ ನಾನು ಬಿಜೆಪಿ ಪಕ್ಷವನ್ನು ತೊರೆಯುತ್ತಿದ್ದೇನೆ. ನಾನು ಟಿಕೆಟ್ ವಿಚಾರಕ್ಕೆ ಮಾತ್ರ ಪಕ್ಷ ಬಿಡುತ್ತಿಲ್ಲ ನನಗಾಗಿರುವ ನೋವಿನಿಂದ ಪಕ್ಷ ಬಿಡುತ್ತಿದ್ದೇನೆ. ನನಗೆ ಯಾರ ಮೇಲೂ ದ್ವೇಷವೂ ಇಲ್ಲ. ಇದರಿಂದ ಯಾವುದೇ ಲಾಭವಿಲ್ಲ, ಯಾರ ಮನಸ್ಸಿಗೂ ನಾನು ನೋವು ಮಾಡುವುದಿಲ್ಲ. ನಾಳೆ ಬೆಳಗ್ಗೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಭಾಪತಿಗಳಿಗೆ ರಾಜೀನಾಮೆ ಕೊಡಲಾಗುವುದು ಎಂದು ಸವದಿ ಘೋಷಣೆ ಮಾಡಿದರು.
ಡಿಸಿಎಂ ಸ್ಥಾನದಿಂದ ಯಾಕೆ ಕೈ ಬಿಟ್ಟಿದ್ದು: ನನ್ನ ಗಮನಕ್ಕೆ ಬಾರದೆ ಡಿಸಿಎಂ ಸ್ಥಾನದಿಂದ ನನ್ನ ತೆಗೆದಿದ್ದು ಯಾಕೆ? ನನಗೆ ಈ ಬಗ್ಗೆ ಹೇಳಿದ್ದರೆ ಸಂತೋಷದಿಂದ ಒಪ್ಪಿ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ, ಡಿಸಿಎಂ ಸ್ಥಾನದಿಂದ ನನ್ನ ಕೆಳಗಿಳಿಸಲು ನಾನೇನು ಭ್ರಷ್ಟಾಚಾರ ಮಾಡಿದ್ನಾ? ಅಥವಾ ಲಂಚ ತಿಂದಿದ್ನಾ? ಯಾಕೆ ಡಿಸಿಎಂ ಸ್ಥಾನದಿಂದ ಕೆಳಗಿಳಿಸಿದಿರಿ ಎಂದು ಸವದಿ ಪ್ರಶ್ನೆ ಮಾಡಿದರು.
ಇನ್ನು ಕಾಂಗ್ರೆಸ್ ಸೇರಲು ಸಿದ್ದರಾಮಯ್ಯ ಕರೆ ಮಾಡಿದ್ದಾರೆ ಎಂಬ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೇರೆಯವರ ಮುಖಾಂತರ ಸಂಪರ್ಕ ಮಾಡಿದ್ದಾರೆ. ಆದರೆ ನಾನು ಈಗಲೇ ಭವಿಷ್ಯ ಹೇಳಲ್ಲ. ಕವಡೆ ಹಾಕಿ ಭವಿಷ್ಯ ಕೇಳುವುದೂ ನನಗೆ ಗೊತ್ತಿಲ್ಲ ಎಂದು ಸವದಿ ಹೇಳಿದರು.
ಇದನ್ನೂ ಓದಿ:ಕೈ ತಪ್ಪಿದ ತುಮಕೂರು ವಿಧಾನಸಭಾ ಟಿಕೆಟ್ ; ಬಿಜೆಪಿಗೆ ಮಾಜಿ ಸಚಿವ ಸೊಗಡು ಶಿವಣ್ಣ ರಾಜೀನಾಮೆ