ಚಿಕ್ಕೋಡಿ: ಅಥಣಿಯಲ್ಲಿ ರಾಜಕೀಯ ವಾತಾವರಣ ಬದಲಾಗಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟಕರ ಎಂದು ಲಕ್ಷ್ಮಣ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಿವಣಗಿ ಸಾಂಸ್ಕ್ರತಿಕ ಭವನದಲ್ಲಿ ಪಂಚಮಸಾಲಿ ಸಮಾಜದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಥಣಿ ಸುದ್ದಿಗಳನ್ನು ದಿನನಿತ್ಯ ನೀವು ಮಾಧ್ಯಮಗಳಲ್ಲಿ ನೋಡುತ್ತಿದ್ದೀರಿ. ಒಂದು ಕಡೆ ಮಹೇಶ್ ಕುಮಟಳ್ಳಿಗೆ ಟಿಕೆಟ್, ಮತ್ತೊಂದು ದಿನ ಲಕ್ಷ್ಮಣ ಸವದಿಗೆ ಟಿಕೆಟ್ ಎಂದು ಚರ್ಚೆ ಆಗುತ್ತಿದೆ. ಆದರೆ, ಯಾರಿಗೆ ಟಿಕೆಟ್ ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ಕಳೆದ ಎರಡು ದಿನದಿಂದ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಆ ಸಭೆಯಲ್ಲಿ ಸಿಎಂ ಸೇರಿದಂತೆ 14 ಜನ ಇರುತ್ತಾರೆ. ಎರಡು ದಿನಗಳ ಕಾಲ ಪ್ರತಿ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ ಮೂರು ಅಭ್ಯರ್ಥಿಗಳು ಎಂದು ಪಟ್ಟಿ ಸಿದ್ಧ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಪಟ್ಟಿಯನ್ನು ದೆಹಲಿಗೆ ಕಳಿಸುತ್ತಾರೆ. ನಿನ್ನೆ ಸಭೆ ಮುಗಿದಿದೆ ಎಂದು ಹೇಳಿದರು.
"ಆ ಸಭೆಯಲ್ಲಿ ಅಥಣಿ ಕ್ಷೇತ್ರದ ಟಿಕೆಟ್ ವಿಚಾರ ಬಂತು. ಈ ವೇಳೆ ಸಭೆಯಲ್ಲಿ ನಾನು ಇರಬೇಕಾ?, ಬೇಡ್ವಾ? ಎಂದು ಕೇಳಿದೆ. ವರಿಷ್ಠರು ಇರುವಂತೆ ಸೂಚಿಸಿದರು. ಬಳಿಕ ಮಾತನಾಡಿದ ನಾನು, ಅಥಣಿ ಟಿಕೆಟ್ ಕಗ್ಗಂಟಾಗಿದೆ. ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಟ್ಟರೆ ಗೆಲುವು ಸ್ವಲ್ಪ ಕಷ್ಟವಾಗಲಿದೆ. ಒಂದು ವೇಳೆ, ಅವರು ಸೋತರೆ ಈ ಸೋಲನ್ನು ನನಗೆ ಹಣೆಪಟ್ಟಿ ಕಟ್ಟುವುದಕ್ಕೆ ನನ್ನ ಜಿಲ್ಲೆಯಲ್ಲಿ ಕೆಲವರು ಇದ್ದಾರೆ. ಪಕ್ಷಕ್ಕೆ ಅಭ್ಯರ್ಥಿಗಳ ಸೋಲು ಬೇಡ, ನನಗೆ ಟಿಕೆಟ್ ಕೊಡಿ ನಾನು ಗೆಲ್ಲುತ್ತೇನೆ ಎಂದು ಕೇಳಿದ್ದೇನೆ. ಆ ಕೋರ್ ಕಮಿಟಿಯಲ್ಲಿ ಈ ಎಲ್ಲಾ ವಿಚಾರವನ್ನು ಹೇಳಿದ್ದೇನೆ. ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕು" ಎಂದರು.
ಇದನ್ನೂ ಓದಿ :ಟಿಕೆಟ್ ಕೇಳುವ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಮುಂದಾದ ಲಕ್ಷ್ಮಣ ಸವದಿ