ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಲಕ್ಷ್ಮಣ ಸವದಿ ಅವರಿಗೆ ಸೋತ ಬಳಿಕವೂ ಒಂದರ ಮೇಲೊಂದರಂತೆ ಪ್ರಮುಖ ಹುದ್ದೆಗಳು ದೊರೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಗಾಂಚಿ (ಗಾಣಿಗರು) ಸಮಾಜಕ್ಕೆ ಸೇರಿದವರು ಎಂಬ ಕಾರಣಕ್ಕೆ ಲಕ್ಷ್ಮಣ ಸವದಿ ಅವರಿಗೆ ಸೋತ ಬಳಿಕವೂ ಲಕ್ ಮೇಲೆ ಲಕ್ ಕುಲಾಯಿಸುತ್ತಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. ಸಹಕಾರ ಕ್ಷೇತ್ರದ ಹೋರಾಟದ ಮೂಲಕವೇ ರಾಜಕೀಯ ಪ್ರವೇಶಿಸಿದ್ದ ಲಕ್ಷ್ಮಣ ಸವದಿ, 1999ರಲ್ಲಿ ಅಥಣಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದರು.
ಬಳಿಕ 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸತತ ಮೂರು ಸಲ ಗೆಲುವು ದಾಖಲಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡರು. ಸೋಲಿನ ಬಳಿಕವೇ ಸವದಿಗೆ ಅದೃಷ್ಟದ ಬಾಗಿಲು ತೆರೆದಿದ್ದು. ಅಥಣಿ ಕ್ಷೇತ್ರದಿಂದ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿತ್ತು.
ಇನ್ನು ಬಿಜೆಪಿ ಹೈಕಮಾಂಡ್ ಸವದಿ ಅವರನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಉಸ್ತುವಾರಿ ಜವಾಬ್ದಾರಿ ಸಹ ನೀಡಿತ್ತು. ಮೈತ್ರಿ ಸರ್ಕಾರದ ಪತನದ ಬಳಿಕ ಸಿಎಂ ಹುದ್ದೆಗೇರಿದ ಬಿಎಸ್‍ವೈ ಸಂಪುಟದಲ್ಲಿ ಅಚ್ಛರಿ ರೀತಿಯಲ್ಲಿ ಸೇರ್ಪಡೆಗೊಂಡರು. ಸಾಲದೆಂಬಂತೆ ಇದೀಗ ರಾಜ್ಯದ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಸವದಿ ಅವರಿಗೆ ಇಷ್ಟೆಲ್ಲ ಅವಕಾಶಗಳು ಸಿಗಲು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನ ಹಾಗೂ ಆರ್‍ಎಸ್‍ಎಸ್ ಸೂಚನೆಯೇ ಕಾರಣ ಎನ್ನುತ್ತಿವೆ ಮೂಲಗಳು.
ಬಿಎಸ್‍ವೈ ಸಂಪುಟದಲ್ಲಿ ಸವದಿ ಅವರಿಗೆ ಡಿಸಿಎಂ ಜತೆಗೆ ಕೆಲ ಜವಾಬ್ದಾರಿ ನೀಡುವ ಮೂಲಕ ಲಿಂಗಾಯತ ಸಮುದಾಯದಲ್ಲಿ ಹಿಂದುಳಿದ ಗಾಣಿಗ ಸಮಾಜದ ನಾಯಕನನ್ನು ಬೆಳೆಸುವುದು ಮೋದಿ ಅವರ ಅಪೇಕ್ಷೆ ಎನ್ನಲಾಗುತ್ತಿದೆ. ಇದರ ಜತೆಗೆ ಸವದಿ ಅವರು ಪಕ್ಷ ಸಂಘಟನೆಯಲ್ಲಿ ಕ್ರೀಯಾಶೀಲರಾಗಿರುವುದು, ಆರ್‍ಎಸ್‍ಎಸ್ ಜತೆಗೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಇನ್ನು ಜಿಲ್ಲೆಯ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬವನ್ನು ರಾಜಕೀಯವಾಗಿ ದುರ್ಬಲ ಮಾಡಲು ಲಕ್ಷ್ಮಣ ಸವದಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿವೆ ಎಂದೂ ಹೇಳಲಾಗುತ್ತಿದೆ.