ಬೆಳಗಾವಿ/ ಬೆಂಗಳೂರು: ಸರ್ಕಾರ ಡ್ರಗ್ಸ್ ಹಾಗೂ ಮಾದಕ ಪದಾರ್ಥಗಳ ಮಾರಾಟವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆರೋಗ್ಯ, ಆಹಾರ ಇಲಾಖೆಗಳೊಂದಿಗೆ ಚರ್ಚಿಸಿ ಶೀಘ್ರವೇ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದರು.
ವಿಧಾನಸಭೆಯಲ್ಲಿ ಇಂದು ಶಾಸಕ ಸಿ ಕೆ ರಾಮಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಕ್ಕಾ ಬಾರ್ ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಯಾವುದೇ ರೀತಿಯ ವ್ಯಾಪಾರ ಪರವಾನಗಿ ನೀಡುವುದಿಲ್ಲ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ದಿಂದ ಪರವಾನಗಿ ಪಡೆದು ವ್ಯಾಪಾರಿಗಳು ಹುಕ್ಕಾ ಬಾರ್ಗಳನ್ನು ನಡೆಸುತ್ತಿದ್ದಾರೆ. ನ್ಯಾಯಾಲಯವು ಕೂಡ ಹುಕ್ಕಾ ಸೇದುವವರಿಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಬೇಕು ಎಂದು ಹೇಳಿದೆ. ಆದರೆ ನಿಯಂತ್ರಣದ ಬಗ್ಗೆ ಏನೂ ಹೇಳಿಲ್ಲ. ಆದರೂ ಯುವ ಜನಾಂಗದ ಸ್ವಾಸ್ತ್ಯದ ದೃಷ್ಠಿಯಿಂದ ಹುಕ್ಕಾ ಬಾರ್ ನಿಯಂತ್ರಣಕ್ಕೆ ಕಾನೂನು ರೂಪಿಸಲಾಗುವುದು ಎಂದು ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಅಕ್ಟೋಬರ್ 19ರಂದು ಬೆಂಗಳೂರಿನ ಕೊರಮಂಗಲದ ಹುಕ್ಕಾ ಬಾರ್ನಲ್ಲಿ ಜರುಗಿದ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಕಟ್ಟಡದಿಂದ ಜಿಗಿದ ವ್ಯಕ್ತಿ ಅಂದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾನೆ. ಮೂರನೇ ಮಹಡಿಯಲ್ಲಿ ಇದ್ದ ಹುಕ್ಕಾ ಬಾರ್ನಲ್ಲಿ 14 ಸಿಲಿಂಡರ್ಗಳನ್ನು ಸಂಗ್ರಹಿಸಲಾಗಿತ್ತು ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.