ಬೆಂಗಳೂರು/ಬೆಳಗಾವಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮಧ್ಯಂತರ ವರದಿ ಸಲ್ಲಿಸಿದ್ದು, ವರದಿ ಬಗ್ಗೆ ಕಾನೂನು ಸಚಿವರ ಜತೆ ಚರ್ಚಿಸಿ ಮೀಸಲಾತಿ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಇವತ್ತು ಬೆಳಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಜಯಪ್ರಕಾಶ್ ಹೆಗ್ಡೆ ಭೇಟಿ ಮಾಡಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಅದರ ಬಗ್ಗೆ ಮುಂದೇನು ಕ್ರಮ ತಗೆದುಕೊಳ್ಳಬೇಕು ಎಂದು ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಆದಷ್ಟು ಬೇಗ ಕಾನೂನಾತ್ಮಕವಾಗಿ ಚರ್ಚಿಸಿ, ಎಲ್ಲ ಸಮುದಾಯದ ನಾಯಕರ ವಿಶ್ವಾಸದೊಂದಿಗೆ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಸದನಕ್ಕೆ ತಿಳಿಸಿದರು.
ಕಾನೂನಾತ್ಮಕವಾಗಿ ಚರ್ಚಿಸಿ ತೀರ್ಮಾನ:ಸಾಮಾನ್ಯವಾಗಿ ವರದಿ ಬಂದ ಸಂದರ್ಭದಲ್ಲಿ ಸರ್ಕಾರ ಒಪ್ಪದೇ ಅದರ ವಿವರ ಯಾವತ್ತೂ ಬಹಿರಂಗ ಪಡಿಸಿಲ್ಲ. ನಾಗಮೋಹನ್ ದಾಸ್ ವರದಿ ಬಂದು ಒಂದು ವರ್ಷ ಆದ ಮೇಲೆ ಅದನ್ನು ಒಪ್ಪಿ ವಿವರ ಕೊಟ್ಟಿದ್ದೆವು.
ಸದಾಶಿವ ಆಯೋಗ ವರದಿ ಬಂದು ಹತ್ತು ವರ್ಷ ಆದರೂ ಸರ್ಕಾರ ಅದನ್ನು ಒಪ್ಪದ ಕಾರಣ ವಿವರ ಕೊಟ್ಟಿಲ್ಲ. ಅದೇ ರೀತಿ ಕಾಂತರಾಜು ವರದಿ ಬಂದರೂ ಆಯೋಗದಲ್ಲಿ ಇದೆ. ಆದರೆ, ಈ ವರದಿ ಬಗ್ಗೆ ಕಾನೂನಾತ್ಮಕ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲ ಪಕ್ಷದ ನಾಯಕರ ವಿಶ್ವಾಸದೊಂದಿಗೆ ಮುಂದುವರಿಯುತ್ತೇವೆ ಎಂದು ಮಾಹಿತಿ ನೀಡಿದರು.
ಅವಧಿಗೆ ಮುನ್ನ ಚುನಾವಣೆ ಇಲ್ಲ:ಅವಧಿ ಮುಂಚೆ ಚುನಾವಣೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಅವಧಿ ಮುನ್ನ ಚುನಾವಣೆಯ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ದೆಹಲಿ ನಾಯಕರು ಸಿಎಂ ಜತೆಗೆ ಮಾತನಾಡಿದ್ದಾರೆ ಎಂಬುದು ಸತ್ಯವಲ್ಲ. ದೆಹಲಿ ನಾಯಕರು ನನ್ನ ಜತೆ ಮಾತನಾಡಿಲ್ಲ. ಅವಧಿ ಮುಂಚೆ ಚುನಾವಣೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.