ಬೆಳಗಾವಿ : ಹಾಸನ ಜಿಲ್ಲೆ ಹೇಮಾವತಿ ಜಲಾಶಯ ವ್ಯಾಪ್ತಿಯ ನಿರಾಶ್ರಿತರಿಗೆ ಹಕ್ಕುಪತ್ರ ನೀಡಲು ಕಾನೂನು ತಿದ್ದುಪಡಿ ಮಾಡಿ ನ್ಯಾಯ ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಅನುಭೋಗದಾರರ ಪೂರ್ವಿಕರ ಮಹಜರು ಮಾಡಿ ಮುಳುಗಡೆ ಸಂತ್ರಸ್ತರನ್ನು ಗುರುತಿಸಿ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತೇವೆ ಎಂದರು.
ಈ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಆರ್.ಅಶೋಕ್ಗೆ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದರು. ಹಾಸನ ಜಿಲ್ಲೆ ಆಲೂರು ತಾಲೂಕು ಬ್ಯಾಬಾ ಫಾರೆಸ್ಟ್ ಗ್ರಾಮದಲ್ಲಿ ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರಾಗಿದ್ದರೂ ದುರಸ್ತು ಆಗದೇ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಮಾತನಾಡಿದರು.
ಸಚಿವ ಆರ್.ಅಶೋಕ್ ಉತ್ತರಿಸಿ, ಹೇಮಾವತಿ ಜಲಾಶಯ ಯೋಜನೆಯಡಿ 234 ಮುಳುಗಡೆ ಸಂತ್ರಸ್ತರಿಗೆ ಆಲೂರು ತಾಲೂಕಿನಲ್ಲಿ ಬದಲಿ ಜಮೀನು ನೀಡಲಾಗಿದೆ. ಬ್ಯಾಬಾ ಫಾರೆಸ್ಟ್ ಗ್ರಾಮದ ಸರ್ವೆ ನಂಬರ್ 1 ರ 1505 ಎಕರೆ ಜಮೀನಿನಲ್ಲಿ ಏಕವ್ಯಕ್ತಿ ಕೋರಿಕೆ ಮೇರೆಗೆ 58 ಜನರಿಗೆ 207 ಎಕರೆ 28 ಗುಂಟೆ ಜಮೀನು ದುರಸ್ತುಗೊಳಿಸಲಾಗಿದೆ.
ಸ್ವಾಧೀನಾನುಭವದ ಆಧಾರದ ಮೇಲೆ ದುರಸ್ತು(ಮೋಜಣಿ) ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ, ಹಲವರಿಗೆ ಭೂಮಿ ಮಂಜೂರಾಗಿದ್ದರೂ ಕೂಡ, ಕೆಲವರ ಹಕ್ಕುಪತ್ರಗಳಲ್ಲಿ ನೈಜತೆ ಕೊರತೆಗಳಿವೆ. ಇದರಿಂದಾಗಿ ಜಮೀನಿನ ಅನುಭೋಗದಾರರಿಗೆ ಕೊಡಲು ಅವಕಾಶ ಇಲ್ಲ, ದಾಖಲೆ ಕೊಟ್ಟರೆ ಮಂಜೂರು ಮಾಡಲಾಗುವುದು ಎಂದರು. ಬಳಿಕ ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಸಂತ್ರಸ್ತರ ಹೆಸರಿನಲ್ಲಿ ಅಕ್ರಮಗಳಾಗಿವೆ, ಆ ಬಗ್ಗೆ ತನಿಖೆ ಆಗುತ್ತಿದೆ, ಮೂಲ ದಾಖಲೆಗಳು ಕಂದಾಯ ಇಲಾಖೆಯಲ್ಲಿರಬೇಕು, ದಾಖಲೆಗನ್ನು ಒದಗಿಸು ಹೊಣೆ ಕಂದಾಯ ಇಲಾಖೆಯದ್ದೇ ಆಗಿದೆ ಎಂದು ತಿಳಿಸಿದರು.