ಬೆಳಗಾವಿ:ತಾಲೂಕಿನ ಮಚ್ಛೆ ಗ್ರಾಮದಲ್ಲಿ ಪುರಾತನ ಕಾಲದ ಜೈನ ಮಂದಿರ. ಜೈನ ಮಂದಿರದ ಜೀರ್ಣೋದ್ಧಾರ ವಿಚಾರಕ್ಕೆ ಜೈನ ಸಮುದಾಯದ ಎರಡು ಪಂಗಡಗಳ ಮಧ್ಯೆ ಗಲಾಟೆ ಉಂಟಾಗಿದೆ. ಜೈನ ಮಂದಿರದಲ್ಲಿರುವ ಜಿನಬಿಂಬ ಉತ್ತಾಪನೆ ಮಾಡುವ ವೇಳೆ ಎರಡು ಪಂಗಡಗಳ ಸದಸ್ಯರ ಮಧ್ಯೆ ಘರ್ಷಣೆ ನಡೆದಿದ್ದು, ಮಂದಿರದಲ್ಲಿದ್ದ ಮೂರ್ತಿ ಆವರಣಕ್ಕೆ ಬಂದಿದೆ. ಮಚ್ಛೆ ಗ್ರಾಮದ 1008 ಭಗವಾನ್ ಮಹಾವೀರ ದಿಗಂಬರ ಜೈನ ಮಂದಿರ ಜೀರ್ಣೊದ್ಧಾರ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.
ತೀರ್ಪಿನಂತೆ ಜೀರ್ಣೋದ್ಧಾರ: ಜೈನ ಮಂದಿರದಲ್ಲಿ ಎರಡು ಕಮೀಟಿಗಳಾಗಿವೆ. ಶ್ರೀ 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ ಸಂಘ ಹಾಗೂ ಶ್ರೀ ಮಹಾವೀರ ಚೈತ್ರಾಲಯ ಟ್ರಸ್ಟ್ ಕಮಿಟಿ ಮಧ್ಯೆ ಹಲವು ವರ್ಷಗಳಿಂದ ಜಗಳವಿದ್ದು ಹೈಕೋರ್ಟ್‌ನಲ್ಲಿ ಕೇಸ್ ದಾಖಲಾಗಿ ಮಾರ್ಚ್ 31ರಂದು ವಿಚಾರಣೆ ಮುಕ್ತಾಯವಾಗಿದೆ. ಹೈಕೋರ್ಟ್‌ನಲ್ಲಿ ತೀರ್ಪು ತಮ್ಮ ಪರ ಬಂದಿದ್ದು, ಅದರಂತೆ ನಾವು ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದ್ದೇವೆ. ಆದರೆ, ಇದಕ್ಕೆ ಬೋಗಸ್ ಕಮಿಟಿಯವರು ವಿರೋಧಿಸುತ್ತಿದ್ದಾರೆ ಎಂಬುದು 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ ಸಂಘದ ವಾದ.
ಮೂಲ ಕಮಿಟಿ:ಶ್ರೀ ಮಹಾವೀರ ಜೈನ್ ಚೈತ್ರಾಲಯ ಟ್ರಸ್ಟ್ ಕಮಿಟಿಯವರು ಹೇಳುವ ಪ್ರಕಾರ, ತಮ್ಮದೂ ಮೂಲ ಕಮಿಟಿ ಇದ್ದು 1956ರಲ್ಲಿ ರಜಿಸ್ಟ್ರೇಷನ್ ಆಗಿದೆ. 2013ರಲ್ಲಿ ಗೌಡರು ಮತ್ತು ರೈತರು ಅಂತಾ ಎರಡು ಪಾರ್ಟಿ ಆದವು. ಅವರು ಸೊಸೈಟಿ ರಿಜಿಸ್ಟ್ರೇಷನ್ ಮಾಡಿಕೊಂಡು ಬಸದಿ ನಮ್ಮದೇ ಅಂತಾ ಹೇಳಲು ಶುರು ಮಾಡಿದ್ದರು. ಟ್ರಸ್ಟಿ ಮೊಮ್ಮಗನ ಜತೆ ಸೇರಿ ನಾವು ಕಮಿಟಿ ಮಾಡಿದೆವು. ಅದಕ್ಕೆ ಅವರು ವಿರೋಧ ಮಾಡಿ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು ಎಂದು ತಿಳಿಸಿದರು.