ಬೆಳಗಾವಿ:ಪತ್ನಿಯ ಸೀಮಂತ ಕಾರ್ಯಕ್ಕೆ ರಜೆಯ ಮೇಲೆ ಬಂದಿದ್ದ ಯೋಧರೊಬ್ಬರು ಅಪರಿಚಿತ ವಾಹನ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಯೋಧನ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಜರುಗಿತು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಯೋಧ ಪ್ರಕಾಶ ಮಡಿವಾಳಪ್ಪ ಸಂಗೊಳ್ಳಿ (28) ಅಪಘಾತದಲ್ಲಿ ಸಾವನ್ನಪ್ಪಿದ ಸೈನಿಕ. ಮೃತ ಯೋಧ ಕಳೆದ 9 ವರ್ಷಗಳಿಂದ ಬೆಳಗಾವಿಯ ಮರಾಠ ಲೈಟ್ ಇನ್ಪೇಂಟರಿ 9ನೇ ರೆಜಿಮೆಂಟ್‌ನಲ್ಲಿ ಸೈನಿಕನಾಗಿ ಬೆಳಗಾವಿಯಲ್ಲಿ ಸೇವೆಯಲ್ಲಿದ್ದರು.
ಹುಟ್ಟೂರು ಬೈಲಹೊಂಗಲದಲ್ಲಿ ಯೋಧನಿಗೆ ಭಾವಪೂರ್ಣ ವಿದಾಯ ಕಳೆದ ಎರಡು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪ್ರಕಾಶ ಮಗುವಿನ ನಿರೀಕ್ಷೆಯಲ್ಲಿದ್ದರು. ಪತ್ನಿಯ ಸೀಮಂತ ಕಾರ್ಯವನ್ನು ಜೂ.12ರಂದು ಅದ್ಧೂರಿಯಾಗಿ ನಡೆಸಲು ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ, ಗುರುವಾರ ತಡರಾತ್ರಿ ಬೆಳಗಾವಿಯಿಂದ ಬೈಕ್ನಲ್ಲಿ ಮನೆಗೆ ಮರಳುವಾಗ ಹಲಗಾ ಬಳಿ ರೈಸ್ ಮಿಲ್ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಯೋಧನ ಮರಣದಿಂದ ಸೀಮಂತ ಕಾರ್ಯಕ್ರಮದ ಸಂಭ್ರಮದಲ್ಲಿ ಇರಬೇಕಿದ್ದ ಕುಟುಂಬದಲ್ಲಿ ದುಃಖ ಆವರಿಸಿದೆ.
ಯೋಧನ ಪಾರ್ಥಿವ ಶರೀರವನ್ನು ಬೈಲಹೊಂಗಲ ಪಟ್ಟಣದಿಂದ ಗ್ರಾಮಕ್ಕೆ ಗೆಳೆಯರು, ಗ್ರಾಮದ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ಬೈಕ್ ರ‍್ಯಾಲಿ ಮೂಲಕ ಗ್ರಾಮಕ್ಕೆ ಕೊಂಡೊಯ್ದರು. ಪ್ರಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪತ್ನಿ, ಕುಟುಂಬಸ್ಥರು, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೆಲ ಗಂಟೆ ಕಾಲ ಸಾರ್ವಜನಿಕ ದರ್ಶನಕ್ಕಾಗಿ ಮನೆ ಮುಂಭಾಗದಲ್ಲಿ ಇರಿಸಿ, ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ:ಮದ್ಯ ಕುಡಿಯಲು ಹಣ ನೀಡದ ತಾಯಿ: ಮಗನಿಂದ ಹೆತ್ತಮ್ಮನ ಕೊಲೆ