ಕರ್ನಾಟಕ

karnataka

ETV Bharat / state

'ಹೆಣ್ಣಿನ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ಇತಿಹಾಸದ ಪುಟ ತಿರುವಿ ನೋಡಿ' - sanjay patil talk about laxmi

'ಅಣ್ಣಾ, ನಿನಗೆ ಹೆಂಡಂದಿರಿದ್ದಾರೆ. ಮಗಳು, ತಾಯಿ ಇದ್ದಾರೆ. ಅಕ್ಕ ತಂಗಿಯರಿದ್ದಾರೆ. ನೀನು ಮಾತನಾಡಿರುವುದು ನನಗಲ್ಲ. ನಿನ್ನ ಮಾತಿನ ಬಗ್ಗೆ ವಿಮರ್ಶೆ ಮಾಡಿಕೋ' ಎಂದು ಸಂಜಯ್ ಪಾಟೀಲ್​ ಅವರಿಗೆ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

Laxmi hebbalkar reaction about sanjay patil statement
ಸಂಜಯ್ ಪಾಟೀಲ್​ಗೆ ಹೆಬ್ಬಾಳ್ಕರ್ ತಿರುಗೇಟು

By

Published : Oct 1, 2021, 3:19 PM IST

ಬೆಳಗಾವಿ: ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದಿತ ಹೇಳಿಕೆ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮೌನ ಮುರಿದಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈಗಾಗಲೇ ಕ್ಷೇತ್ರದ ಪ್ರತಿ ಊರಿನಲ್ಲಿಯೂ ಜನ ಸಂಜಯ್ ಪಾಟೀಲ್​ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ ನಾನು ಸಂಜಯ್ ಪಾಟೀಲ್ ಅಣ್ಣಾಗೆ ಪ್ರತಿಕ್ರಿಯಿಸಲ್ಲ' ಎಂದರು.

'ನಮ್ಮ ಮುಖಂಡರು ಉತ್ತರ ಕೊಡ್ತಾರೆ':

'ಸಂಜಯ್ ಪಾಟೀಲ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹೇಳಿದ್ದಾರೋ, ವೈಯಕ್ತಿಕವಾಗಿ ಹೇಳಿದ್ದಾರೋ ಅನ್ನೋದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹಾಗು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು. ಹೆಣ್ಣಿನ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಅನ್ನೋದನ್ನು ಇತಿಹಾಸದ ಪುಟ ತಿರುವಿ ನೋಡಿ. 2023ರ ಚುನಾವಣೆ ಬರುವಿಕೆಗೆ ನಾನು ಕಾಯುತ್ತಿದ್ದೇ‌ನೆ. 2018ಕ್ಕಿಂತಲೂ 2023ರ ಚುನಾವಣೆಗೆ ಕಾತುರದಿಂದ ಕಾಯ್ತಿದ್ದೇನೆ. ನನ್ನ ಕ್ಷೇತ್ರದ ಮತದಾರರು, ನಮ್ಮ ಮುಖಂಡರು ಅವರಿಗೆ ಉತ್ತರ ಕೊಡ್ತಾರೆ. ನನ್ನ ವಿರುದ್ಧ ಸಂಜಯ್ ಪಾಟೀಲ್ ಸ್ಪರ್ಧೆ ಬಗ್ಗೆ ಅವರ ಪಕ್ಷ ನಿರ್ಧಾರ ಮಾಡುತ್ತೆ. ಸಂಜಯ್ ಪಾಟೀಲ್ ಅಣ್ಣಾ ಸ್ಪರ್ಧೆ ಮಾಡಿದರೆ ಸಂತೋಷದಿಂದ ಎದುರಿಸುತ್ತೇನೆ' ಎಂದು ಹೆಬ್ಬಾಳ್ಕರ್‌ ಹೇಳಿದರು.

ಇದನ್ನೂ ಓದಿ: ಶಾಸಕಿ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ

'ನನಗಿಂತ ಮುಂಚೆ 10 ವರ್ಷ ಪಾಟೀಲ್ ಶಾಸಕರಾಗಿದ್ದರು':

'ಸಂಜಯ್ ಪಾಟೀಲ್‌ ಹೇಳಿಕೆಯ‌‌ನ್ನು ಗಮನಿಸಿದ್ದೇನೆ. ಬ್ಯಾನರ್‌‌ ಅನ್ನು ಮರಾಠಿಗರು ಹಚ್ಚಿದ್ದಾರೆ ಅಂತಾ ಹೇಳಿದ್ದಾರೆ. ಹಾಗಾದ್ರೆ ಯಾರು ಹಚ್ಚಿದ್ದಾರೆ? ಎಂಬುದು ಸಂಜಯ್ ಪಾಟೀಲ್‌ಗೆ ಗೊತ್ತಿರಬೇಕಲ್ವಾ? ಅಷ್ಟೇ ಅಲ್ಲದೇ ಬ್ಯಾನರ್‌ ಅನ್ನು ರಾತ್ರಿ ವೇಳೆ ಕಟ್ಟಿದ್ದಾರೆ. ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಹೋಗಲಾಗುತ್ತಿಲ್ಲ. ನನ್ನ ಕ್ಷೇತ್ರದ ಎಷ್ಟೋ ಸ್ಮಾರ್ಟ್ ಕ್ಲಾಸ್, ಶಾಲಾ ಕೊಠಡಿ ಉದ್ಘಾಟನೆ ಮಾಡಬೇಕಿದೆ. ಇಂತಹ ನೂರು ಜನ ಅಣ್ಣಂದಿರು ಬಂದರೂ ನಾನು ಎದುರಿಸುತ್ತೇನೆ. ನನಗಿಂತ ಮುಂಚೆ 10 ವರ್ಷ ಸಂಜಯ್ ಪಾಟೀಲ್ ಶಾಸಕರಾಗಿದ್ದರು. ಅವರಿಗಿಂತ ಮುಂಚೆ ಮನೋಹರ್ ಕಡೋಲ್ಕರ್, ಅಭಯ್ ಪಾಟೀಲ್ ಶಾಸಕರಾಗಿದ್ದರು. ಅಭಯ್ ಪಾಟೀಲ್ ಇದ್ದ ವೇಳೆ ಕೆಲ ಅಭಿವೃದ್ಧಿ ಕೆಲಸ ಮಾಡಿದ್ದರು. ಅಭಯ್ ಪಾಟೀಲ್ ಹೆಸರಲ್ಲೇ ಎರಡು ಸಲ ಸಂಜಯ್ ಪಾಟೀಲ್ ಹಿಂದೆ ಗೆದ್ದಿದ್ದರು. ಆದರೆ, ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ' ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

'ಅಣ್ಣಾ, ನಿನಗೆ ಹೆಂಡಂದಿರಿದ್ದಾರೆ. ಮಗಳು, ತಾಯಿ ಇದ್ದಾರೆ. ಅಕ್ಕ ತಂಗಿಯರಿದ್ದಾರೆ. ನೀನು ಮಾತನಾಡಿರುವುದು ನನಗಲ್ಲ. ನಿನ್ನ ಮಾತಿನ ಬಗ್ಗೆ ವಿಮರ್ಶೆ ಮಾಡಿಕೋ' ಎಂದು ತಿರುಗೇಟು ನೀಡಿದರು.

'ನಾನು ಅವರಲ್ಲಿ ಏನೂ ಕೇಳ ಬಯಸಲ್ಲ. ನಾನು ರಾಜಕಾರಣ ಮಾಡುವಾಗ ಐಟಿ,ಇಡಿಗೆ ಪತ್ರ ಬರೆದು ನನ್ನ ಮೇಲೆ ದಾಳಿ ಮಾಡಿಸಿದ್ದರು. ಆದರೂ ನಾನು ಶಾಸಕಿಯಾದೆ. ಈಗ ನನ್ನ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಮುಂದಿನ ಬಾರಿ ಜನತೆಯ ಆಶೀರ್ವಾದದಿಂದ ಮಂತ್ರಿಯೂ ಆಗುತ್ತೇನೆ' ಎಂದು ಶಾಸಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details