ಬೆಳಗಾವಿ: ವಿಷಪೂರಿತ ಮೇವು ಸೇವಿಸಿ ಕುರಿಗಳು ಮೃತಪಟ್ಟಿದ್ದಕ್ಕೆ ತಕ್ಷಣ ಸ್ಪಂದಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಕುರಿಗಾಹಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.
ಕುರಿಗಾಹಿಗಳ ಸಂಕಷ್ಟಕ್ಕೆ ಕರಗಿದ ಮನ: ಆರ್ಥಿಕ ನೆರವು ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್
ವಿಷಪೂರಿತ ಮೇವು ಸೇವಿಸಿ ಕುರಿಗಳು ಮೃತಪಟ್ಟ ಹಿನ್ನೆಲೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರ್ಥಿಕ ಸಹಾಯ ಮಾಡಿ ಕುರಿಗಾಹಿಗಳ ಕಂಬನಿ ಒರೆಸಿದ್ದಾರೆ.
ಸುಳಗಾ ಗ್ರಾಮದ ಪರುಶರಾಮ ಭೀಮಾ ಉಚಗಾಂವಕರ್ ಹಾಗೂ ಯಲ್ಲಪ್ಪ ರಾಮಾ ನರೋಟಿ ಕುಟುಂಬಗಳಿಗೆ ಸಂಬಂಧಪಟ್ಟ ಸುಮಾರು ಹದಿನೈದು ಕುರಿಗಳು ಆಕಸ್ಮಿಕವಾಗಿ ವಿಷಪೂರಿತ ಸಸ್ಯಗಳನ್ನು ತಿಂದು ಮೃತಪಟ್ಟಿದ್ದವು. ಸುದ್ದಿ ತಿಳಿದ ತಕ್ಷಣ ಕುರಿಗಾಹಿಗಳ ಮನೆಗೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್, ಸಾಂತ್ವನ ಹೇಳಿ ಸಹಾಯ ಮಾಡಿದ್ದಾರೆ.
ಕುರಿಗಳನ್ನು ನಂಬಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಇಂತವರಿಗೆ ಕುರಿಗಳೇ ಜೀವನದ ಆಧಾರ ಸ್ತಂಭಗಳಾಗಿವೆ. ಕುರಿಗಳ ಸಾವಿನ ಹಿನ್ನೆಲೆ ಈ ಕುಟುಂಬಗಳು ಪರಿತಪಿಸುತ್ತಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೆಬ್ಬಾಳ್ಕರ್ ಭರವಸೆ ನೀಡಿದರು.